ಕೋಲಾರ: ಕೋವಿಡ್ ಸಂದರ್ಭದಲ್ಲಿ ಏನಾದರೂ ಹಗರಣ ಮಾಡಿರುವುದು ಸಾಬೀತಾದರೆ ನನ್ನನ್ನು ಪಬ್ಲಿಕ್ನಲ್ಲಿ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಖಡಕ್ ಆಗಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಗೊತ್ತಿದೆ, ಹಣಕ್ಕಾಗಿ ನಾವು ಬಿಜೆಪಿ ಹೋಗಿಲ್ಲ ಅನ್ನೋದು. ಕೋವಿಡ್ ವೇಳೆ 3 ಸಾವಿರ ಕೋಟಿ ಖರ್ಚು ಮಾಡಿಯೇ ಇಲ್ಲ. ಈ ಬಗ್ಗೆ ನಾನು ಶ್ವೇತಪತ್ರದಲ್ಲಿ ಬರೆದುಕೊಡಲು ನಾನು ಸಿದ್ಧ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಾಯ್ತು. ಆದರೆ ಸಿದ್ದರಾಮಯ್ಯ ಪಲಾಯನ ಮಾಡಿದರು ಎಂದು ಹೇಳಿದರು.
ಕೋಲಾರ ಅವರಿಗೆ ಬಹಳ ಕಷ್ಟ, ಇಲ್ಲಿ ಕೆಲವು ನಾಯಕರುಗಳು ಸ್ಥಳೀಯವಾಗಿ ಸೋಲುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಅಡ್ಡಿಟ್ಟುಕೊಂಡು ಗೆಲ್ಲಬೇಕೆಂದು ಇಲ್ಲಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ. ಬಹುಶ ಅವರು ಕೊನೆಗೆ ಇಲ್ಲಿ ಸ್ಪರ್ಧೆ ಮಾಡುವುದಿಲ್ಲ. ಬೌಲಿಂಗ್ ಕೋಲಾರದ ಕಡೆ ಹಾಕಿ, ರನ್ ವರುಣಾ ಕಡೆ ಓಡುತ್ತಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಜೊತೆಗಿನ ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿಗೆ ಹೋಗಿದ್ದು, ಈಗ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಆರೋಪ ಮಾಡ್ತಾರೆ. ಆರೋಗ್ಯ ಇಲಾಖೆಯ ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೊಡುತ್ತೇವೆ. ಸಿಎಜಿ ವರದಿ ಏನು ಉಲ್ಲೇಖ ಮಾಡಿದೆ ಅನ್ನೋದನ್ನು ನಾಳೆ ಹೇಳುತ್ತೇನೆ. 2013ರಿಂದ 2018ರವರೆಗೆ 35 ಸಾವಿರ ಕೋಟಿ ಹಣ ವ್ಯತ್ಯಾಸ ಆಗಿದೆ ಎಂದು ಮಾಹಿತಿ ನೀಡಿದರು.