ಚಾಮರಾಜನಗರ: ಸಿದ್ದರಾಮಯ್ಯರನ್ನು ಬಿಜೆಪಿಗಿಂತ ಕಾಂಗ್ರೆಸ್ ಪಾರ್ಟಿ ಒಳಗಿರುವವರೇ ಸೋಲಿಸುತ್ತಾರೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರದಲ್ಲಿ ನಿಲ್ಲಲ್ಲು ಹೈಕಮಾಂಡ್ ಹೇಳಿತ್ತಾ? ಚುನಾವಣೆ ಸೋಲುವ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋಲಾರ ಕುರುಬರ ಸಂಘವು ಬಹಿರಂಗವಾಗಿ ಬಿಜೆಪಿಯ ವರ್ತೂರು ಪ್ರಕಾಶ್‌ಗೆ ಬೆಂಬಲ ಸೂಚಿಸಿದೆ. ಇನ್ನು ಸಿದ್ದರಾಮಯ್ಯನವರಿಗೆ ಉಳಿದಿರೋದು ಮುಸ್ಲಿಂ ಮತಗಳು ಮಾತ್ರ ಎಂದರು.
ಸಿದ್ದರಾಮಯ್ಯನವ್ರು ಖಂಡಿತಾ ಸೋಲುತ್ತಾರೆ, ಕೋಲಾರದಲ್ಲಿ ಅವರ ಸ್ಫರ್ಧೇ ಹಿತವಲ್ಲ ಎಂದರು. ವಿಜಯ ಸಂಕಲ್ಪ ಯಾತ್ರೆಗೆ ಗೈರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೋಮಣ್ಣಗೆ ಆರೋಗ್ಯ ಸರಿ ಇಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದರು. ಯಡಿಯೂರಪ್ಪ ಸೋಮಣ್ಣ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ನಾನು ಕೂಡ ಯಡಿಯೂರಪ್ಪರನವರ ಕೆಲ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಾರಿ 150 ಗುರಿ ಘೋಷವಾಕ್ಯದಡಿ ಬಿಜೆಪಿ ವಿಜಯಸಂಕಲ್ಪ ರಥಯಾತ್ರೆ ಆರಂಭವಾಗಿದ್ದು, 20ರವರೆಗೆ ನಡೆಯಲಿದೆ.