ಯಾದಗಿರಿ : ‘ಸಿದ್ದರಾಮಯ್ಯ ಲಾಟರಿ ಸಿಎಂ’ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಸಚಿವ ಶರಣಬಸಪ್ಪ ದರ್ಶನಾಪುರ ತಿರುಗೇಟು ನೀಡಿದ್ದು, ‘ಹಾಗಾದರೆ ಮೋದಿ ಯೂಸ್‌ಲೆಸ್ಸಾ’ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಲಾಟರಿ ಸಿಎಂ ಆಗಿದ್ದರೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಭಾರೀ ಸಂಖ್ಯೆಯ ಜನರು ಸೇರುತ್ತಿರಲಿಲ್ಲ. ದಾವಣಗೆರೆಯಂತಹ ಕಾರ್ಯಕ್ರಮ ಭಾರತದಲ್ಲೇ ನಡೆದಿಲ್ಲ, ಮುಂದೆಯೂ ನಡೆಯುವುದಿಲ್ಲ ಎಂದರು.
ಸಿದ್ದರಾಮಯ್ಯ ಲಾಟರಿ ಸಿಎಂ ಆಗಿದ್ದರೆ, ಮೋದಿಗೆ ಏನೆನ್ನಬೇಕು?. ಲಾಟರಿ ಸಿಎಂ ಆಗಿದ್ದರೆ 135 ಸೀಟ್ ಚೀಟಿ ಹಾಕಿ ಗೆದ್ರಾ ಎಂದು ಪ್ರಶ್ನಿಸಿದರು. ಈಶ್ವರಪ್ಪನಿಗೂ ಟಿಕೆಟ್ ಸಿಕ್ಕಿಲ್ಲ, ಅವನ ಮಗನಿಗೂ ಟಿಕೆಟ್ ಸಿಕ್ಕಿಲ್ಲ. ಹಾಗಾಗಿ, ಈ ರೀತಿ ಮಾತನಾಡ್ತಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : K.S.Eshwarppa:ಸಂಸತ್ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿರಲ್ಲ: ಕೆ.ಎಸ್. ಈಶ್ವರಪ್ಪ
ರಾಜ್ಯದಲ್ಲಿ ಬಿಜೆಪಿ ಯಾವತ್ತಾದರೂ 116 ಸೀಟ್ ಗೆದ್ದಿದೆಯಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾವು 122ಕ್ಕೂ ಹೆಚ್ಚು ಸೀಟ್ ಗೆದ್ದಿದೆವು. ಈಗ 130ಕ್ಕೂ ಹೆಚ್ಚು ಸೀಟ್ ಗಳಿಂದ ಗೆದ್ದು ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದಾರೆ. ಹಿರಿಯ ರಾಜಕಾರಣಿ, ಮಾಜಿ ಮಂತ್ರಿಯಾಗಿ ಈಶ್ವರಪ್ಪ ಬೇಕಾಬಿಟ್ಟಿ ಮಾತನಾಡುವುದು ಅವರಿಗೆ ಶೋಭೆ ತರಲ್ಲ ಎಂದರು.
ಸಿದ್ದರಾಮಯ್ಯರಿಗೆ ತನ್ನದೇ ಆದ ವರ್ಚಸ್ಸಿದೆ. ಐದು ವರ್ಷ ಅಧಿಕಾರ ನಡೆಸಿದರೂ ಅವರ ಮೇಲೆ ಯಾವುದೇ ಕಳಂಕ ಬಂದಿಲ್ಲ. ಬಿಜೆಪಿಯವರು 140ರಿಂದ 66 ಸ್ಥಾನಗಳಿಗೆ ಇಳಿದಿದ್ದಾರೆ. ಇಲ್ಲಿಯವರೆಗೆ ತಮ್ಮ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇವರು ಸಿದ್ದರಾಮಯ್ಯ ಬಗ್ಗೆ ಏನು ಮಾತನಾಡುವುದು ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.