ಹಾಸನ: ಯಾರು ಕೆಲಸ ಮಾಡುತ್ತಾರೆ ಅವರಿಗೆ ವೋಟು ಹಾಕಬೇಕು. ಕೆಲಸವಾಗುವವರೆಗೂ ನಮ್ಮ ಜೊತೆಯಲ್ಲೇ ಇದ್ದು, ಕೊನೆಗೆ ನಾವು ಬಿಜೆಪಿಗೆ ವೋಟ್ ಹಾಕಲ್ಲ ಎಂದು ಹೇಳಿದರೆ ಕೆಲಸ ಮಾಡಿದವರಿಗೂ ಕೋಪ ಬರುತ್ತದೆ ಎಂದು ಶಾಸಕ ಪ್ರೀತಂಗೌಡ ಹೇಳಿದರು. ಹಾಸನದ ಶ್ರೀನಗರ ಬಡಾವಣೆಗೆ ಕಳೆದ ರಾತ್ರಿ ಭೇಟಿ ನೀಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ ಎಂದು ಮತದಾರರಿಗೆ ಹೇಳಿದ್ದಾರೆ.
ಅವರಿಗೆ ವೋಟ್ ಹಾಕಬೇಡಿ, ನಾನು ನಿಮ್ಮ ಕೆಲಸವನ್ನೆಲ್ಲಾ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ. ಆ ರೀತಿ ಹೇಳುವವರ ಮನೆಯಲ್ಲಿ ಮೂರು ಸಾರಿ ಮುಖ್ಯಮಂತ್ರಿ ಆಗಿದ್ದರು. ದೊಡ್ಡಗೌಡರು ಒಂದು ಸಾರಿ, ಕುಮಾರಣ್ಣ ಎರಡು ಸಾರಿ ಮುಖ್ಯಮಂತ್ರಿ ಆಗಿದ್ದರು. ರೇವಣ್ಣ ಅವರು ನಾಲ್ಕು ಸಾರಿ ಮಂತ್ರಿಯಾಗಿದ್ದರು. ಆದರೆ ಯಾವತ್ತೂ ಶ್ರೀನಗರಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು
ನೀವು ಬೆಳಗ್ಗೆಯಿಂದಲೂ ಕೂಲಿಗೆ ಹೋಗೋರು ಅಂತೀರಾ, ಸಂಜೆ ಕೂಲಿ ಕೊಡದೇ ಹೋದ್ರೆ ಬಿಡ್ತೀರಾ? ಅದೇ ರೀತಿಯೇ ನಾನು ಇಲ್ಲಿ ಕೆಲಸ ಮಾಡಿರುತ್ತೇನೆ. ಅದಕ್ಕೆ ವೋಟ್‍ನ್ನು ಕೇಳುತ್ತೇವೆ, ಆಗ ನೀವು ನನಗೆ ವೋಟ್ ಹಾಕದೇ ನಾನು ಕಾಂಗ್ರೆಸ್ ನಿಮಗೆ ವೋಟ್ ಹಾಕುವುದಿಲ್ಲ ಎಂದರೆ ಆಗ ನಾನು ಸುಮ್ಮನಿರುವುದಿಲ್ಲ ಎಂದು ವಾರ್ನಿಂಗ್ ನೀಡಿದರು.
ಮುಸಲ್ಮಾನರನ್ನು ನಮ್ಮ ಸಹೋದರರ ರೀತಿಯಲ್ಲೇ ನೋಡುತ್ತೇನೆ. ಮುಂದೆಯೂ ಇದೇ ಭಾವನೆ ಇರುತ್ತದೆ. ಆದರೆ ನಾನು ಕೆಲಸ ಮಾಡಿದ ಸಂದರ್ಭದಲ್ಲಿ ನೀವು ನನಗೆ ಸಹಾಯ ಮಾಡಿಲ್ಲ ಎಂದರೆ ನಿಮ್ಮ ಕಡೆಯೂ ತಿರುಗಿ ನೋಡಲ್ಲ. ಈ ರೀತಿ ತೀರ್ಮಾನ ತೆಗೆದುಕೊಳ್ಳದ ರೀತಿ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದರು.