ತಿರುವನಂತಪುರಂ : ‘ಐಐಟಿಯನ್ನರು ಅಮೆರಿಕಕ್ಕೆ ಹೋದರು, ಸಿಇಟಿಯನ್ನರು ನಮ್ಮನ್ನು ಚಂದ್ರನ ಬಳಿಗೆ ಕರೆದೊಯ್ದರು’ ಎಂದು ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಹೇಳಿದ್ದಾರೆ.
ಚಂದ್ರಯಾನ-3ರ ಯಶಸ್ಸಿನ ಹಿಂದೆ ಕೆಲಸ ಮಾಡಿದ ಇಸ್ರೋದ ವಿಜ್ಞಾನಿಗಳನ್ನು ಕೇರಳದ ಇಂಜಿನಿಯರಿಂಗ್ ಕಾಲೇಜುಗಳು ತಯಾರಿಸಿವೆ ಎಂದಿರುವ ತರೂರ್, ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಕೂಡ ಕೇರಳದ ಇಂಜಿನಿಯರಿಂಗ್ ಕಾಲೇಜಿನ ಉತ್ಪನ್ನ ಎಂದು ಹಾಡಿ ಹೊಗಳಿದ್ದಾರೆ.
ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ಕೇರಳದ ಕೊಲ್ಲಂನ ಟಿಕೆಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಉತ್ಪನ್ನ. ಅವರ ಅನೇಕ ಸಹೋದ್ಯೋಗಿಗಳು ಕಾಲೇಜ್ ಆಫ್ ಇಂಜಿನಿಯರಿಂಗ್ ತಿರುವನಂತಪುರಂ (ಸಿಇಟಿ) ನಲ್ಲಿ ಪದವಿ ಪಡೆದಿದ್ದಾರೆ. ಮೋಹನ್ ಕುಮಾರ್ (ಮಿಷನ್ ಡೈರೆಕ್ಟರ್ / ಮೆಕ್ಯಾನಿಕಲ್), ಅತುಲ್ (ಎಲೆಕ್ಟ್ರಾನಿಕ್ಸ್), ಸತೀಶ್ (ಮೆಕ್ಯಾನಿಕಲ್), ನಾರಾಯಣನ್ (ಅಸೋಸಿಯೇಟ್ ಮಿಷನ್ ಡೈರೆಕ್ಟರ್ / ಮೆಕ್ಯಾನಿಕಲ್), ಮೋಹನ್ (ಮೆಕ್ಯಾನಿಕಲ್) ಮತ್ತು ಶೋರಾ (ಎಲೆಕ್ಟ್ರಾನಿಕ್ಸ್ ) ಇವರೆಲ್ಲ ಸಿಇಟಿನಲ್ಲಿ ಪದವಿ ಪಡೆದ ಇಸ್ರೋ ವಿಜ್ಞಾನಿಗಳು ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಚಂದ್ರಯಾನ ಯಶಸ್ವಿ ಬೆನ್ನಲ್ಲೇ ಟಿವಿಯಲ್ಲಿ ಕಾಣಿಸಿಕೊಂಡ ಮೋದಿ : ಕಾಂಗ್ರೆಸ್ ಕಿಡಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್ ಗಳು (ಐಐಟಿ) ಗಳು ಮಾತ್ರ ದೊಡ್ಡ ದೊಡ್ಡ ವಿಜ್ಞಾನಿಗಳನ್ನು ತಯಾರಿಸುತ್ತಿವೆ ಎಂಬ ಭಾವನೆಯಿದೆ. ಇಸ್ರೋ ವಿಜ್ಞಾನಿಗಳು ಸಣ್ಣಪುಟ್ಟ ಕಾಲೇಜುಗಳಲ್ಲಿ ಕಲಿತರೂ ಕೂಡ ಸಾಧನೆ ಮಾಡಬಹುದು, ಐಐಟಿಗಳಲ್ಲದ ಇಂಜಿನಿಯರಿಂಗ್ ಕಾಲೇಜುಗಳು ಕೂಡ ಪ್ರತಿಭಾವಂತರನ್ನು ತಯಾರಿಸುತ್ತಿವೆ ಎಂಬ ಸಂದೇಶವನ್ನು ಸಾರಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
ಐಐಟಿಗಳಲ್ಲಿ ಕಲಿತವರು ವಿದೇಶಗಳಿಗೆ ಹಾರಿದರೆ, ಸಣ್ಣ ಕಾಲೇಜುಗಳಲ್ಲಿ ಕಲಿತವರು ದೇಶವನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋದರು ಎಂಬ ದಾಟಿಯಲ್ಲಿ ತರೂರ್ ಹೇಳಿಕೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.