ಬೆಂಗಳೂರು : ಕಾವೇರಿ ಜಲ ವಿವಾದ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್ ಮಾಡಿದ್ದು, ಈ ಸಂಬಂಧ ರಣತಂತ್ರ ರೂಪಿಸಲು ಇಂದು ಮಹತ್ವದ ಸಭೆ ಕರೆದಿದೆ.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಿಜೆಪಿಯ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ : ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ರಚಿಸಿ ನಮ್ಮ ಕೈ ಕಟ್ಟಿ ಹಾಕಿದ್ದಾರೆ: ಲಕ್ಷ್ಮಣ್
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಇತ್ತ ಕೆಆರ್ ಎಸ್ ಜಲಾಶಯದಲ್ಲಿ ನೀರಿಲ್ಲ, ಒಂದು ತೊಟ್ಟು ನೀರು ಕೂಡ ತಮಿಳುನಾಡಿಗೆ ಹರಿಸಬಾರದು ಎಂದು ಬಿಜೆಪಿ-ಜೆಡಿಎಸ್ ಪಕ್ಷಗಳು ಮತ್ತು ರೈತರು ಸರ್ಕಾರಕ್ಕೆಆಗ್ರಹಿಸಿದ್ದಾರೆ. ಹಾಗಾಗಿ, ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಇದರ ಲಾಭ ಪಡೆದು ಕಾವೇರಿ ವಿಚಾರವನ್ನು ಜನರ ಮುಂದಿಟ್ಟು ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್ ಮಾಡಿದೆ. ಹಾಗಾಗಿ, ಇಂದಿನ ಸಭೆಯಲ್ಲಿ ಯಾವೆಲ್ಲ ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಎರಡು ದಿನಗಳ ಹಿಂದೆ ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತುರ್ತು ಸರ್ವಪಕ್ಷ ಸಭೆ ಕರೆದಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಕೆಲ ನಾಯಕರು, ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಡಿ. ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ನಮ್ಮ ಸಂಸದರ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಇದೀಗ ಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.