ಹುಬ್ಬಳ್ಳಿ : ಸಚಿವ ಡಿ.ಸುಧಾಕರ್ ವಿರುದ್ಧ ದಾಖಲಾಗಿರುವ ದಲಿತ ದೌರ್ಜನ್ಯ ಪ್ರಕರಣವನ್ನು ಕಾನೂನು ನೋಡಿಕೊಳ್ಳುತ್ತದೆ. ಯಾಕೆ ಅವರ ಮೇಲೆ ಕೇಸ್ ಹಾಕಿದ್ದಾರೆ, ಏನು ಮಾಹಿತಿ ಅದು ಅವರಿಗೆ ಗೊತ್ತಿದೆ. ಆ ಪ್ರಕರಣವನ್ನು ಅವರೇ ಎದುರಿಸಬೇಕಾದದ್ದು ಅವರ ಕರ್ತವ್ಯವಾಗಿದೆ. ಎಲ್ಲದಕ್ಕೂ ರಾಜೀನಾಮೆಯೇ ಪರಿಹಾರವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸುಧಾಕರ್ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲದರಲ್ಲೂ ಕಾನೂನು ಇದೆ. ಅವರ ಮೇಲೆ ಪ್ರಕರಣ ದಾಖಲಾಗಿರುವ ಕುರಿತು ಕಾನೂನಿನ ಚೌಕಟ್ಟಿನಲ್ಲಿ ಏನೇನಾಗಬೇಕೋ ಅವು ನಡೆಯುತ್ತವೆ. ಹಿಂದೆ ಬಿಜೆಪಿ ಸರ್ಕಾರದಲ್ಲೂ ಸಾಕಷ್ಟು ಆರೋಪ ಬಂತು. ಆದರೆ ಯಾರು ರಾಜೀನಾಮೆ ಕೊಡಲಿಲ್ಲ. ಗಂಭೀರತೆ ಇದ್ದರೆ ಕೊಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬರ ತಾಲೂಕುಗಳ ಘೋಷಣೆ : ಇಂದು ಸಂಪುಟ ಉಪ ಸಮಿತಿ ಸಭೆ
ಗೃಹ ಸಚಿವ ಡಾ.ಜಿ ಪರಮೇಶ್ವರ್ ದಲಿತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಯಾರು ಹೇಳಿದ್ದಾರೆ ಅವರಿಗೆ ಕೇಳಬೇಕು. ದಲಿತರಿಗೆ ಅವಕಾಶ ಕೊಡಬೇಕು ಎಂದೇನಿಲ್ಲ, ಅವರು ಕಾಯಬೇಕು ಸ್ವಲ್ಪ ಕಾದ ಬಳಿಕ ಅವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಎಂದು ಪ್ರತಿಪಾದಿಸಿದರು.
ಪರಮೇಶ್ವರ್ ಒಳ್ಳೆಯ ದೃಷ್ಟಿಯಿಂದ ಹೇಳಿದ್ದಾರೆ. ಅವರ ಮಾತಲ್ಲಿ ತಪ್ಪೇನಿಲ್ಲ ತಕ್ಷಣ ಯಾವುದು ಬರಲ್ಲ. ಕಾಯಬೇಕು ಎಲ್ಲದಕ್ಕಿಂತ ದೊಡ್ಡದು ಪಕ್ಷ ಇದೆ. ಪಕ್ಷ ನಿರ್ಧಾರ ಮಾಡಿದ್ದನ್ನು ಪಾಲಿಸಬೇಕು. ದಲಿತ ಸಿಎಂ ಬಗ್ಗೆ ಮಾತನಾಡುವ ಸಂದರ್ಭ ಇದು ಅಲ್ಲ. ಈಗ ಸಿಎಂ ಇದ್ದಾರೆ. ಅವರೇ ಮುಂದುವರಿಯುತ್ತಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ಪಕ್ಷದಲ್ಲಿ ಅಸಮಾಧಾನ ಹೊಸದೇನಲ್ಲ.. :
ಸಿಎಂ ಮೇಲೆ ಹರಿಪ್ರಸಾದ್ ಅಸಮಾಧಾನ ವಿಚಾರದ ಬಗ್ಗೆ ಚರ್ಚೆ ಮಾಡುವುದಕ್ಕೆ ನಮ್ಮ ಪಕ್ಷ ದೊಡ್ಡದಿದೆ. ನೂರಾರು ಜನ ನಾಯಕರಿದ್ದಾರೆ. ಅದೇನೇ ಸಮಸ್ಯೆ ಇದ್ದರೂ ಅವರು ಪರಿಹರಿಸುತ್ತಾರೆ. ಇದೇನು ಕಾಂಗ್ರೆಸ್ ಪಕ್ಷದಲ್ಲಿ ಹೊಸದಲ್ಲ, ಹಿಂದೆ ಎಲ್ಲ ಮುಖ್ಯಮಂತ್ರಿಗಳಿದ್ದಾಗಲೂ ಇಂತಹ ಸಮಸ್ಯೆಗಳು ಉದ್ಭವ ಆಗಿದ್ದವು. ಪರಿಹಾರ ಮಾಡುವ ಕೆಲಸ ನಮ್ಮ ಪಕ್ಷ ಮಾಡಿದೆ. ಯಶಸ್ವಿ ಕೂಡ ಆಗಿದೆ ಎಂದು ಹರಿಪ್ರಸಾದ್ ಸಿಎಂ ಮೇಲಿನ ಅಸಮಾಧಾನಕ್ಕೆ ಸಚಿವರು ಹೀಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ : ಕಾವೇರಿ ಜಲ ವಿವಾದ : ಇಂದು ಸರ್ವಪಕ್ಷಗಳ ತುರ್ತು ಸಭೆ
ಹೆಚ್ಚು ಸೀಟ್ ಗೆಲ್ತೀವಿ..
ಅಲ್ಲದೆ, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ವಿಚಾರದಲ್ಲಿ ಮಾತನಾಡಿದ ಅವರು, ಯಾರೇ ಸೇರಿದರು ನಾವು ಸಮರ್ಥವಾಗಿ ಹೆಚ್ಚು ಸೀಟು ಗೆಲ್ಲಲೇ ಬೇಕು, ನಾವು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ನೀರು ತಮಿಳುನಾಡಿಗೆ ಹರಿಬಿಡಲು ನಮ್ಮ ಹತ್ತಿರ ಇದ್ದಷ್ಟು ನೀರು ಬಿಟ್ಟಿದ್ದೇವೆ. ಇನ್ನೂ ಹೆಚ್ಚು ಬಿಡೋಕೆ ಆಗುವುದಿಲ್ಲ ಎಂದು ಸಿಎಂ, ಸಚಿವರು ಹೇಳಿದ್ದಾರೆ. ಅವರು ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡುತ್ತಾರೆ ಎಂದರು. ಮಹದಾಯಿ ಯೋಜನೆಗೆ ಕೇಂದ್ರದಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ. ಕೇಂದ್ರದವರು ಸಮಸ್ಯೆ ಬಗೆಹರಿಸಿದರೆ ನಾವು ಕೆಲಸ ಮಾಡಲು ತಯಾರಿದ್ದೇವೆ ಎಂದು ತಿಳಿಸಿದರು.
ಸ್ವಾಮೀಜಿಗೆ ಬೆದರಿಕೆ ಹೊಸದೇನಲ್ಲ..
ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ ವಿಚಾರ ದೇಶದಲ್ಲಿ ರಾಜ್ಯದಲ್ಲಿ ಇದು ಹೊಸದೇನಲ್ಲ. ಅದನ್ನೆಲ್ಲ ಮೀರಿ ಕೆಲಸ ಮಾಡಬೇಕಿದೆ. ಹೋರಾಟಗಾರರಿಗೆ ಬೆದರಿಕೆ ಇದ್ದೆ ಇದೆ ಈ ದೇಶದಲ್ಲಿ. ಅವರ ರಕ್ಷಣೆಗೆ ನಮ್ಮ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇದೆ. ಪೊಲೀಸರು ವಿಚಾರಣೆ ಮಾಡುತ್ತಾರೆ ಎಂದು ಹೇಳಿದರು.
ಹಿಂದಿನ ಸರ್ಕಾರದವರು ಅನುದಾನ ಇಲ್ಲದೇ ಹೆಚ್ಚು ಕೆಲಸ ಮಾಡಿದ್ದಾರೆ. ನಾಲ್ಕರಷ್ಟು ಹೆಚ್ಚು ಬಿಲ್ ಇದೆ. ಅದನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ತಿಳಿಸಿದ್ದೇನೆ. ಅನುದಾನ ಇಲ್ಲದೇ ಹೆಚ್ಚು ಅಭಿವೃದ್ಧಿ ಮಾಡಲು ಆಗುವುದಿಲ್ಲ, ಇತಿಮಿತಿಯಲ್ಲಿ ಮಾಡುತ್ತೇವೆ. ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 11 ಜನ ಶಾಸಕರಿದ್ದೇವೆ. ಮುಖಂಡರು ಅಂತಿಮವಾಗಿ ತೀರ್ಮಾನ ಮಾಡಬೇಕು. ಕಾದು ನೋಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.