ಶಿವಮೊಗ್ಗ : ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹೊಂದಾಣಿಕೆ ಆಗಿದೆ. ಈ ದೇಶದಲ್ಲಿ ಕಾಂಗ್ರೆಸ್ ಬೇಡ ಎಂದು ಇಡೀ ದೇಶದ ಜನರು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಸುವ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ನಿರ್ನಾಮ ಮಾಡುವ ಒಂದೇ ಉದ್ದೇಶದಿಂದ ಬಿಜೆಪಿ, ಜೆಡಿಎಸ್ ಒಂದಾಗಿದ್ದೇವೆ ಎಂದು ಮೈತ್ರಿ ವಿಚಾರಕ್ಕೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಎಂದರೆ ಗ್ರಾಮ ಪಂಚಾಯತಿ ಹಾಗೂ ತಾಲೂಕಾ ಪಂಚಾಯತ ಚುನಾವಣೆಯಲ್ಲ. ಇದು ದೇಶವನ್ನು ಉಳಿಸುವ ಚುನಾವಣೆಯಾಗಿದೆ. ದೇಶವನ್ನು ಉಳಿಸುವ ಸಲುವಾಗಿ ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೈತ್ರಿ ಚರ್ಚೆಗೆ ಇನ್ನೂ ಸಮಯವಿದೆ : ಹೆಚ್.ಡಿ. ಕುಮಾರಸ್ವಾಮಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಪಡೆದಿತ್ತು. ಈ ಬಾರಿ ಒಂದು ಸ್ಥಾನ ಕಾಂಗ್ರೆಸ್ ಪಡೆಯಬಾರದೆಂದು ಎರಡೂ ಪಕ್ಷಗಳು ಒಂದಾಗಿದ್ದೇವೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜೆಡಿಎಸ್ ಒಂದಾಗಿದ್ದಕ್ಕೆ ಮತದಾರರು ಸಂತೋಷಪಟ್ಟಿದ್ದಾರೆ. ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡಲು ಒಂದಾಗಿದ್ದೇವೆ. ಕಳೆದ ಬಾರಿ ಸಿದ್ದರಾಮಯ್ಯ ಅವರು ಬಿಜೆಪಿ ಒಂದು ಸ್ಥಾನ ಪಡೆಯುವುದಿಲ್ಲ ಎಂದಿದ್ದರು. ಆ ವೇಳೆ ಅವರು ಸೋತರು, ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು. ಕಾಂಗ್ರೆಸ್ ಯಾವಾಗಲೂ ವ್ಯತಿರಿಕ್ತವಾದ ಚಿಂತನೆ ಮಾಡುತ್ತದೆ ಎಂದು ಕಿಡಿ ಕಾರಿದ್ದಾರೆ.
ನಾವು ದೇಶಕ್ಕೆ ಅನುಕೂಲವಾಗುವ ಚಿಂತನೆಯಿಂದ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ದೇಶವನ್ನು ನಾಶ ಮಾಡಿದೆ. 9 ವರ್ಷದಲ್ಲಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಮಾಡಿರುವುದನ್ನು ಜನರು ನೋಡುತ್ತಿದ್ದಾರೆ. ಜೆಡಿಎಸ್ ಜೊತೆ ಭಯದಿಂದ ಮೈತ್ರಿ ನಾವು ಮಾಡಿಕೊಂಡಿಲ್ಲ. ಇದಕ್ಕೆಲ್ಲ ಚುನಾವಣೆ ನಂತರ ಉತ್ತರ ಸಿಗುತ್ತದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.