ನವದೆಹಲಿ: ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಅದರಲ್ಲಿ ಭ್ರಷ್ಟಾಚಾರ, ಜಾತಿವಾದ ಮತ್ತು ಕೋಮುವಾದಕ್ಕೆ ಯಾವುದೇ ಸ್ಥಾನವಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ; ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ನಮ್ಮ ರಾಷ್ಟ್ರೀಯ ಜೀವನದಲ್ಲಿ ಯಾವುದೇ ಸ್ಥಾನವಿಲ್ಲ” ಎಂದರು.
ಇದನ್ನೂ ಓದಿ: 1 ವರ್ಷ ಪೂರೈಸಿದ ಭಾರತ್ ಜೋಡೋ; ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ಯಾತ್ರೆ!
ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಕುರಿತು ಮಾತನಾಡಿದ ಪ್ರಧಾನಿ, ಜಗತ್ತು ಈಗ ಭಾರತದತ್ತ ನೋಡುತ್ತಿದೆ. “ನಮ್ಮ ಮಾತುಗಳು ಮತ್ತು ದೃಷ್ಟಿಯನ್ನು ಜಗತ್ತು ಭವಿಷ್ಯದ ಮಾರ್ಗಸೂಚಿಯಾಗಿ ನೋಡುತ್ತದೆ ಮತ್ತು ಕೇವಲ ಕಲ್ಪನೆಗಳಲ್ಲ” ಎಂದರು.
ವಿಶ್ವದ ಜಿಡಿಪಿ-ಕೇಂದ್ರಿತ ದೃಷ್ಟಿಕೋನವು ಮಾನವ-ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾಗುತ್ತಿದೆ ಮತ್ತು ಈ ಪರಿವರ್ತನೆಯಲ್ಲಿ ಭಾರತವು ತುಂಬಾ ವೇಗವಹಿಸುತ್ತಿದೆ ಎಂದು ಹೇಳಿದರು.
ಭಾರತದ ಬಗೆಗಿನ ಪ್ರಪಂಚದ ಗ್ರಹಿಕೆ ಹೇಗೆ ಬದಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ದೀರ್ಘಕಾಲದಿಂದ ಭಾರತವನ್ನು ಒಂದು ಶತಕೋಟಿ ಹಸಿದ ಹೊಟ್ಟೆಗಳ ದೇಶವಾಗಿ ನೋಡಲಾಗುತ್ತಿತ್ತು. ಈಗ ಅದು ಒಂದು ಶತಕೋಟಿ ಮಹತ್ವಾಕಾಂಕ್ಷೆಯ ಮನಸ್ಸುಗಳು ಮತ್ತು ಎರಡು ಶತಕೋಟಿ ಕೌಶಲ್ಯಪೂರ್ಣ ಕೈಗಳು” ಎಂದು ಹೇಳಿದರು.
ಭಾರತದ ಜನಸಂಖ್ಯೆಯು ಮುಂದಿನ ಕೆಲವು ದಶಕಗಳಲ್ಲಿ ಬೃಹತ್ ಜನಸಂಖ್ಯಾ ಲಾಭಾಂಶವನ್ನು ಪಡೆಯಲು ಸಾಧ್ಯವಾಗಿಸುತ್ತದೆ. ಮುಂದಿನ 1,000 ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ಬೆಳವಣಿಗೆಗೆ ಅಡಿಪಾಯ ಹಾಕಲು ಇಂದು ಭಾರತೀಯರಿಗೆ ಉತ್ತಮ ಅವಕಾಶವಿದೆ. “ಒಂದೊಮ್ಮೆ ಸರಳವಾಗಿ ದೊಡ್ಡ ಮಾರುಕಟ್ಟೆಯಾಗಿ ಕಂಡ ಭಾರತ ಈಗ ಜಾಗತಿಕ ಸವಾಲುಗಳಿಗೆ ಪರಿಹಾರದ ಭಾಗವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಗಡಿ ರಾಜ್ಯಗಳಲ್ಲಿ ಜಿ20 ಸಭೆಗೆ ಪಾಕ್-ಚೀನಾ ವಿರೋಧ ; ಪ್ರಧಾನಿ ಹೇಳಿದ್ದೇನು?
ಇನ್ನು ಮುಂದುವರೆದು ಮಾತನಾಡಿದ ಅವರು, ಬೇಜವಾಬ್ದಾರಿಯುತ ಹಣಕಾಸು ನೀತಿಗಳು ಮತ್ತು ಜನಪರತೆಯು ಅಲ್ಪಾವಧಿಯ ರಾಜಕೀಯ ಫಲಿತಾಂಶಗಳನ್ನು ನೀಡಬಹುದು ಆದರೆ ದೀರ್ಘಾವಧಿಯಲ್ಲಿ ದೊಡ್ಡ ಸಾಮಾಜಿಕ, ಆರ್ಥಿಕ ಬೆಲೆಯನ್ನು ಪಡೆದುಕೊಳ್ಳಬಹುದು ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.