ನವದೆಹಲಿ: ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ತಮ್ಮ ಬಜೆಟ್ ಭಾಷಣದಲ್ಲಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳ ಕಾಲ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದ್ದೇವೆ, 10 ವರ್ಷಗಳಲ್ಲಿ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ಬಡವರಿಗೆ ಇನ್ನೂ ಒಂದು ವರ್ಷಗಳ ಕಾಲ ಉಚಿತ ಆಹಾರ ನೀಡಲಾಗುವುದು.
ಕೋವಿಡ್ ಕಾಲದಲ್ಲಿ ಹಸಿವನ್ನು ನೀಗಿಸಿದ ಈ ಯೋಜನೆಯನ್ನು ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸುತ್ತಿದ್ದೇವೆ. ಈ ಯೋಜನೆ ಜಾರಿಗೆ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಅಗತ್ಯವಿದ್ದು, ಸಂಪೂರ್ಣ ವೆಚ್ಚ ಕೇಂದ್ರ ಭರಿಸಲಿದೆ ಎಂದು ಹೇಳಿದರು.
ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದಾಗಿದೆ ಎಂದು ಹೇಳಿದರು. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಭಾರತದ ಆರ್ಥಿಕತೆಯು ದೊಡ್ಡಮಟ್ಟದಲ್ಲಿ ಪ್ರಗತಿ ಕಂಡಿದೆ. ನಮ್ಮ ಸ್ಥಾನಮಾನವು ಹೆಚ್ಚಾಗಿದೆ ಎಂದು ತಿಳಿಸಿದರು.