ನವದೆಹಲಿ : ‘ಪಾಕಿಸ್ತಾನದ ಜೊತೆಗಿನ ಸಮಸ್ಯೆ ಬಗೆಹರಿಯದ ಹೊರತು ಭಾರತ ವಿಶ್ವ ಗುರುವಾಗಲು ಸಾಧ್ಯವಿಲ್ಲ’ ಎಂದು ಮಾಜಿ ರಾಜತಾಂತ್ರಿಕ ಅಧಿಕಾರಿ, ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ 1978 ರಿಂದ ಜನವರಿ 1982ರವರೆಗೆ ಕರಾಚಿಯಲ್ಲಿ ಭಾರತದ ಕಾನ್ಸಲ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಮಣಿಶಂಕರ್ ಅಯ್ಯರ್ ಅವರ ಆತ್ಮಚರಿತ್ರೆ “ಮೆಮೊರೀಸ್ ಆಫ್ ಎ ಮೇವರಿಕ್ -ದಿ ಫಸ್ಟ್ ಫಿಫ್ಟಿ ಇಯರ್ಸ್ (1941-1991)’ ಸೋಮವಾರ ಮಾರುಕಟ್ಟೆಗೆ ಬಂದಿದೆ. ಈ ಕೃತಿಯಲ್ಲಿ ತಾನು ಪಾಕಿಸ್ತಾನದಲ್ಲಿದ್ದ ಅನುಭವವನ್ನು ಹೇಳಿಕೊಳ್ಳಲು ಸಂಪೂರ್ಣ ಒಂದು ಅಧ್ಯಾಯವನ್ನು ಅಯ್ಯರ್ ಮೀಸಲಿಟ್ಟಿದ್ದಾರೆ.
ಭಾರತದ ಅತೀ ದೊಡ್ಡ ಆಸ್ತಿ ಪಾಕಿಸ್ಥಾನದಲ್ಲಿದೆ :
ಜಗ್ಗರ್ನಾಟ್ ಬುಕ್ಸ್ ಪ್ರಕಟಿಸಿದ ತನ್ನ ಆತ್ಮಚರಿತ್ರೆಯ ಕುರಿತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದಲ್ಲಿ ಭಾರತದ ಕಾನ್ಸಲ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಅವಧಿ ತನ್ನ ಜೀವನದ ಪ್ರಮುಖ ಘಟ್ಟವಾಗಿದೆ. ‘ಭಾರತದ ಅತೀ ದೊಡ್ಡ ಆಸ್ತಿ ಪಾಕಿಸ್ಥಾನದಲ್ಲಿದೆ. ನಮ್ಮನ್ನು ಶತ್ರುಗಳಂತೆ ನೋಡದ ಪಾಕಿಸ್ತಾನದ ನಾಗರಿಕರು ಭಾರತದ ಅತೀ ದೊಡ್ಡ ಆಸ್ತಿ’ ಎಂದು ಅಯ್ಯರ್ ಹೇಳಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪಾಕ್‌ನಿಂದ ಬರ್ತಾರೆ ಸಹೋದರಿ!
‘ಪಾಕಿಸ್ತಾನದಲ್ಲಿ ನಿಯೋಜನೆಗೊಂಡು ಮೂರು ವಾರಗಳಾಗಿತ್ತು. ಒಂದು ದಿನ ನಾನು ನನ್ನ ಪತ್ನಿ ರಾತ್ರಿ ಊಟ ಮುಗಿಸಿ ವಾಪಾಸ್ ಬರುತ್ತಿದ್ದೆವು. ಆಗ ನನ್ನ ಪತ್ನಿ ಸುನೀತ್ ಇದು ನಮ್ಮ ಶತ್ರು ರಾಷ್ಟ್ರ ಅಲ್ಲವೇ? ಎಂದು ಪ್ರಶ್ನಿಸಿದ್ದಳು. ಆ ಪ್ರಶ್ನೆಗೆ ನನ್ನ ಬಳಿ ಉತ್ತರ ಇರಲಿಲ್ಲ. ಅಲ್ಲಿದ್ದ ಮೂರು ವರ್ಷ ಮತ್ತು ಆ ವೃತ್ತಿ ತೊರೆದ 40 ವರ್ಷಗಳಿಂದ ನನ್ನಲ್ಲಿ ಆ ಪ್ರಶ್ನೆ ಕಾಡುತ್ತಲೇ ಇದೆ. ಸೇನೆ ಮತ್ತು ರಾಜಕಾರಣಿಗಳ ಲೆಕ್ಕಾಚಾರ ಏನೇ ಇರಲಿ. ನಾನು ಯಾವತ್ತೂ ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ಪರಿಗಣಿಸಿಲ್ಲ. ಅಲ್ಲಿನ ನಾಗರಿಕರು ಯಾವತ್ತೂ ನಮ್ಮನ್ನು ಶತ್ರುಗಳಂತೆ ನೋಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅಯ್ಯರ್ ಹೇಳಿದ್ದಾರೆ.
ಪಾಕಿಸ್ತಾನ ನಮಗೆ ಒಂದು ರೀತಿಯ ಹೊರೆಯಾಗಿ ಪರಿಣಮಿಸಿರುವಾಗ ನಾವು ಜಾಗತಿಕವಾಗಿ ಮೇಲೇರಲು ಸಾಧ್ಯವಿಲ್ಲ. ನಮ್ಮ ನೆರೆಯ ರಾಷ್ಟ್ರದೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ತಿಳಿಯದಿರುವಾಗ ನಾವು ವಿಶ್ವಗುರು ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.