ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗೆ ಬೀಗ ಹಾಕಲಾಗಿದೆ. ಪಾರ್ವತಿಪುರ, ಸಂಪಿಗೆ ರಾಮನಗರ, ಬಿಸ್ಮಿಲ್ಲಾನಗರದ ಟ್ಯಾಂಕ್‌ಬಂಡ್ ರಸ್ತೆ, ಹೊಸಹಳ್ಳಿ, ಪುಲಿಕೇಶಿ ನಗರ, ಎಚ್‌ಎಸ್‌ಆರ್ ಲೇಔಟ್‌ನ ಸೋಮಸುಂದರ ಪಾಳ್ಯ, ಸುಬ್ರಮಣ್ಯಪುರಂನ ವಸಂತನಗರ, ಮಹದೇವಪುರದ ಎ. ನಾರಾಯಣಪುರ, ಕೋಗಿಲು, ಪ್ರಕೃತಿನಗರ ಸೇರಿದಂತೆ 40 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಲಾಗಿದೆ.
ಬಿಬಿಎಂಪಿಯಿಂದ ಸಬ್ಸಿಡಿ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎನ್ನುವ ಕಾರಣ ನೀಡಿ ಸಾಕಷ್ಟು ಕಡೆ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ.ಆರ್ ಆರ್ ನಗರ ವಲಯದಲ್ಲಿ ಒಟ್ಟು 8 ಕ್ಯಾಂಟೀನ್ಗಳನ್ನು ಕ್ಲೋಸ್ ಮಾಡಲಾಗಿದೆ. ಆರಂಭದಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ತಲಾ 400 ಜನರು ಆಗಮಿಸುತ್ತಿದ್ದರು. ಈಗ ಅದರ ಸಂಖ್ಯೆ ಪ್ರತಿ ನಿತ್ಯ 100ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿತ್ತು.
ಇಂದಿರಾ ಕ್ಯಾಂಟೀನ್ ಗ್ರಾಹಕರ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎನ್ನಲಾಗಿದೆ. ಮೊದಲು ದಿನ ನಿತ್ಯ 3.5 ಲಕ್ಷ ಮಂದಿ ಪ್ರತಿದಿನ ಕ್ಯಾಂಟೀನ್ ಗೆ ಬರುತ್ತಿದ್ದರು. ಇದೀಗ ಅದರ ಸಂಖ್ಯೆ 1.5 ಲಕ್ಷಕ್ಕೆ ಇಳಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 198 ಇಂದಿರಾ ಕ್ಯಾಂಟೀನ್ ಗಳಿವೆ. ಈ ಪೈಕಿ 175 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟೀನ್ಗಳಿತ್ತು. ಹಾಗೂ ಕೆಲವೇ ಬಿಜೆಪಿ ಶಾಸಕರ ಸೂಚನೆ ಮೇರೆಗೆ ಕ್ಯಾಂಟೀನ್ಗಳನ್ನು ಮುಚ್ಚಲಾಗುತ್ತಿದೆ. ನಗರದ 198 ವಾರ್ಡ್‌ಗಳಲ್ಲೂ ತಲಾ ಒಂದು ಇಂದಿರಾ ಕ್ಯಾಂಟೀನ್ ತೆರೆಯಲು ಯೋಜನೆ ರೂಪಿಸಲಾಗಿತ್ತು. ಬಿಜೆಪಿ ಸರ್ಕಾರ ಬೆಂಗಳೂರಿನ 40 ಇಂದಿರಾ ಕ್ಯಾಂಟೀನ್ಗಳಿಗೆ ಬೀಗ ಹಾಕಿದೆ.