ಹಾಸನ : ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು, ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಂಸದರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದ ತಾಲೂಕುಗಳಲ್ಲಿ ಮಳೆಯಿಲ್ಲದೆ ಬೆಳೆ ಹಾನಿಯಾಗಿದೆ. ಜಿಲ್ಲೆಯ ಜಲಾಶಯದಿಂದ ಕಳೆದ ಒಂದೂವರೆ ತಿಂಗಳಿಂದ ಹದಿನಾರು ಟಿಎಂಸಿ ನೀರು ಬಿಟ್ಟಿದ್ದಾರೆ. ರಾಜ್ಯದ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಯಾವ ನಾಲೆಗೆ ಎಷ್ಟು ನೀರು ಬಿಟ್ಟಿದ್ದಾರೆ ಅಂಕಿ ಅಂಶ ನೀಡಲಿ, ನೀರು ಬಿಟ್ಟ ಮೇಲೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಏನು ಪ್ರಯೋಜನ? ನಿಯೋಗ ಕರೆದುಕೊಂಡು ಹೋದರೆ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ವಾಪಸ್ ಕೊಡುತ್ತಾರಾ? ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ವಿಧಾನಸಭೆ ಅಧಿವೇಶನ ಕರೆದು ರಾಜ್ಯದಲ್ಲಿ ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಹೇಮಾವತಿ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಹೇಮಾವತಿ ಜಲಾಶಯದಲ್ಲಿ ಸದ್ಯ ಹದಿನಾರು ಟಿಎಂಸಿ ನೀರಿದೆ ಎನ್ನುತ್ತಿದ್ದಾರೆ. ಉಳಿದ ಹದಿನಾರು ಟಿಎಂಸಿ ನೀರು ಎಲ್ಲಿಗೆ ಹೋಯಿತು. ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ನೀರನ್ನು ಹೇಗೆ ಬಿಟ್ಟಿದ್ದಾರೆ? ಇಲ್ಲಿಯವರೆಗೂ ಹದಿನಾರು ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರಾ…? ನಾಲೆಗಳಿಗೆ ಬಿಟ್ಟಿದ್ದಾರಾ…? ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಹೇಗೆ ನೀರು ಹರಿಸಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗಡಿ ರಾಜ್ಯಗಳಲ್ಲಿ ಜಿ20 ಸಭೆಗೆ ಪಾಕ್-ಚೀನಾ ವಿರೋಧ ; ಪ್ರಧಾನಿ ಹೇಳಿದ್ದೇನು?
ರಾತ್ರಿಯೆಲ್ಲಾ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ? ಹೀಗಾದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಕಾಲ ಕಾಲಕ್ಕೆ ನಮಗೆ ನೀರು ಬಿಟ್ಟಿದ್ದರೆ ರೈತರು ಒಂದು ಬೆಳೆ ತೆಗೆಯಬಹುದಿತ್ತು. ರೈತರ ಮನೆ ಹಾಳು ಮಾಡುತ್ತಿದ್ದಾರೆ. ರೈತರು ನಾಲೆಯ ನೀರು ನಂಬಿ ಬೆಳೆ ಬೆಳೆದಿದ್ದಾರೆ. ಬೆಳೆ ನಷ್ಟಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳೇ ನೇರ ಹೊಣೆ. ಹಾನಿಯಾಗಿರುವ ರೈತರ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಗ್ಯಾರಂಟಿ ಭರವಸೆ ನೀಡಿ ರೈತರನ್ನು ಹಾಳು ಮಾಡುತ್ತಿದೆ. ಬರ ಘೋಷಣೆಗೆ ಹಾಕಿರುವ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು. ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆ ನಿವೃತ್ತ ನೌಕರ ವೆಂಕಟೇಶ್ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರಕ್ಕೆ ಹದಿನೈದು ಲಕ್ಷ ಕೊಟ್ಟರೆ ಸಾಲದು. ಕನಿಷ್ಠ ಐವತ್ತು ಲಕ್ಷ ಪರಿಹಾರದ ಜೊತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಸಂಸದರಾದ ಪ್ರಜ್ವಲ್ ರೇವಣ್ಣನವರು ಆನೆ ದಾಳಿಗೊಂಡವರ ಮನೆಗೆ ಹೋಗಿ ಬರಲಿದ್ದಾರೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.