ನವದೆಹಲಿ: ಎಲ್‌ಪಿಜಿ ದರ ಇಳಿಕೆ ಮಾಡಿರುವುದು ‘ರೇವಡಿ ಸಂಸ್ಕೃತಿ’ (ಉಚಿತ ಘೋಷಣೆ) ಅಲ್ಲವೇ? ಎಂದು ಪ್ರಧಾನಿ ಮೋದಿಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ರಾಖಿ ಹಬ್ಬದ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ಎಲ್‌ಪಿಜಿ ಮೇಲೆ 200 ರೂಪಾಯಿ ಸಬ್ಸಿಡಿ ಘೋಷಿಸಿದ್ದು, ಈ ಘೋಷಣೆ ಬೆನ್ನಲ್ಲೆ ನಾಯಕ ಸಿಬಲ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ಜೀ: ಉಜ್ವಲಕ್ಕೆ 400 ರೂಪಾಯಿ ಸಬ್ಸಿಡಿಯು ‘ರೇವಡಿ’ ಸಂಸ್ಕೃತಿಯಲ್ಲವೇ? ಇದು ಬಡ ಕುಟುಂಬಗಳಿಗೆ ಎಂದು ನಾನು ಭಾವಿಸುತ್ತೇನೆ. ನೀವು ಅವರನ್ನು ನೆನಪಿಸಿಕೊಂಡಿರುವುದು ಸಂತೋಷವಾಗಿದೆ. 2024 ಸಮೀಪಿಸುತ್ತಿದ್ದಂತೆ ನೀವು ಅವರ ಬಗ್ಗೆ ಹೆಚ್ಚು ಯೋಚಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಆದರೆ ವಿರೋಧ ಪಕ್ಷಗಳು ಯೋಜನೆ ನೀಡಿದಾಗ ಅದು ‘ರೇವಡಿ’ ಸಂಸ್ಕೃತಿಯಾಗುತ್ತದೆ! ಜೈ ಹೋ! ಎಂದು ಕುಟುಕಿದ್ದಾರೆ.
ಇದನ್ನೂ ಓದಿ: ‘2024ಕ್ಕೆ ನಾನು ಹಿಂತಿರುಗುತ್ತೇನೆ’; ಬಿಜೆಪಿ ‘ಟರ್ಮಿನೇಟರ್’ ಪೋಸ್ಟ್ ವೈರಲ್!
ಯುಪಿಎ I ಮತ್ತು II ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್, ಕಳೆದ ವರ್ಷ ಮೇನಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಈ ಮೊದಲು ಕಾಂಗ್ರೆಸ್ ನಾಯಕರು ಸೇರಿ ಇತರರು ಘೋಷಿಸುತ್ತಿದ್ದ ಯೋಜನೆಗಳನ್ನು ಬಿಜೆಪಿ ಬಹಿರಂಗವಾಗಿ ಟೀಕಿಸುತ್ತಿತ್ತು. ಉಚಿತ ಯೋಜನೆಗಳು ದೇಶಕ್ಕೆ ಮಾರಕ ಎನ್ನುತ್ತಿತ್ತು. ಪ್ರಧಾನಿ ಮೋದಿ ಇದನ್ನು ರೇವಡಿ ಸಂಸ್ಕಾರ ಅಂತಲೇ ಹೆಸರಿಸಿ ಟೀಕಿಸುತ್ತಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.