ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ತೋಷಾಖಾನಾ ಪ್ರಕರಣದಲ್ಲಿ ವಿಧಿಸಿದ್ದ ಮೂರು ವರ್ಷಗಳ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದ್ದು, ಜಾಮೀನು ನೀಡಿದೆ.
ಇಸ್ಲಾಮಾಬಾದ್ ಹೈಕೋರ್ಟ್ (ಐಹೆಚ್‌ಸಿ) ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಸೋಮವಾರ ಕಾಯ್ದಿರಿಸಲಾದ ಬಹು ನಿರೀಕ್ಷಿತ ತೀರ್ಪನ್ನು ಇಂದು ಪ್ರಕಟಿಸಿತು.
ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ. ತೀರ್ಪಿನ ಪ್ರತಿ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ : ಕಪಾಳಮೋಕ್ಷಕ್ಕೆ ಗುರಿಯಾದ ಮುಸ್ಲಿಂ ವಿದ್ಯಾರ್ಥಿಯನ್ನ ದತ್ತು ಪಡೆಯಲು ಸಿದ್ಧ: ಕೇರಳ
2018-22ರ ಅವಧಿಯಲ್ಲಿ ಸರ್ಕಾರದ ಉಡುಗೊರೆಗಳನ್ನು (ತೋಷಾಖಾನಾ) ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಇಮ್ರಾನ್ ಖಾನ್ ಶಿಕ್ಷೆಗೆ ಗುರಿಯಾಗಿದ್ದರು. ಇಸ್ಲಾಮಾಬಾದ್ ನ ವಿಚಾರಣಾ ನ್ಯಾಯಾಲಯವು 70 ವರ್ಷದ ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆಗಸ್ಟ್ 5 ರಂದು ತೀರ್ಪು ನೀಡಿತ್ತು. ಇಮ್ರಾನ್ ಖಾನ್ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ನಿರ್ಬಂಧಿಸಲಾಗಿತ್ತು.
ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಇಮ್ರಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಶಿಕ್ಷೆಯನ್ನುಅಮಾನತುಗೊಳಿಸುವ ಮೂಲಕ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ನೀಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.