ನವದೆಹಲಿ: ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹಾತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್, ಚಂದಿರನ ಮೇಲ್ಮೈನಲ್ಲಿ ಇಳಿಯುವ ಪ್ರಕ್ರಿಯೆಯು ಆಗಸ್ಟ್ 23ರಂದು ನಡೆಯಲಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ವಿಕ್ರಮ್ ಲ್ಯಾಂಡರ್ನ (ಡಿಬೂಸ್ಟ್) ವೇಗ ತಗ್ಗಿಸುವ ಕೆಲಸವನ್ನು ವಿಜ್ಞಾನಿಗಳು ಯಶಸ್ವಿಯಾಗಿ ಮುಗಿಸಿದ್ದಾರೆ.
ಚಂದ್ರಯಾನ-3ರ ನೌಕೆಯನ್ನು ಚಂದ್ರನಿಂದ 25 ಕಿಮೀ ಮೇಲ್ಭಾಗದಲ್ಲಿನ ಕಕ್ಷೆಗೆ ತರಲಾಗಿದೆ. ಚಂದ್ರನ ಮೇಲಿನ ಸಾಫ್ಟ್ ಲ್ಯಾಂಡಿಂಗ್‌ಗೆ ಅದು ಮತ್ತಷ್ಟು ಹತ್ತಿರ ಸಮೀಪಿಸಿದೆ. ವಿಕ್ರಮ್ ಲ್ಯಾಂಡರ್‌ನ ಮೊದಲ ಡಿಬೂಸ್ಟಿಂಗ್ ಪ್ರಕ್ರಿಯೆಯು ಶುಕ್ರವಾರ ನಡೆದಿತ್ತು.
ಆದರೆ, ಇದೆಲ್ಲದರ ನಡುವೆ ರಷ್ಯಾದ ಮಿಷನ್ ಮೂನ್ ಹಿನ್ನಡೆ ಅನುಭವಿಸಿದೆ. ಭಾರತದ ಮಿಷನ್ ಚಂದ್ರಯಾನ-3 ಒಂದರ ಹಿಂದೆ ಒಂದರಂತೆ ಪ್ರತಿಯೊಂದು ಕಷ್ಟ ಮತ್ತು ಸವಾಲುಗಳನ್ನು ಮೆಟ್ಟಿನಿಂತು ಯಶಸ್ಸಿನ ಮೆಟ್ಟಿಲುಗಳನ್ನು ಏರುವ ಮೂಲಕ ತನ್ನ ಗಮ್ಯಸ್ಥಾನ ಮತ್ತು ಗುರಿಯತ್ತ ಸಾಗುತ್ತಿದ್ದು, ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆ ಮತ್ತು ವಿಜ್ಞಾನಿಗಳ ಚಿತ್ತ ಭಾರತದತ್ತ ನೆಟ್ಟಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೋ, ‘ಭಾರತದ ಬಾಹ್ಯಾಕಾಶ ಪರಿಶೋಧನೆಯ ಅನ್ವೇಷಣೆಯು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಲು ಗಮನಾರ್ಹ ಮೈಲಿಗಲ್ಲನ್ನು ತಲುಪಿದೆ. ಈ ಸಾಧನೆಯು ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ರಾಷ್ಟ್ರದ ಪ್ರಗತಿಯನ್ನು ಸಂಕೇತಿಸುತ್ತದೆ. ಜತೆಗೆ, ದೇಶದ ವಿಜ್ಞಾನ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೈಗಾರಿಕೆಯ ಮಹತ್ವದ ಹೆಜ್ಜೆಯಾಗಿದೆ’ ಎಂದು ಹೇಳಿದೆ.
ಇದನ್ನೂ ಓದಿ; ಕಾವೇರಿ ನದಿನೀರು ಹಂಚಿಕೆ ವಿವಾದ; ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಒಪ್ಪಿಗೆ
‘ಈ ಕುತೂಹಲಕಾರಿ ಸಂದರ್ಭವನ್ನು ಆಗಸ್ಟ್ 23, 2023ರಂದು ಬೆಳಿಗ್ಗೆ 5.27ರಿಂದ ನೇರ ಪ್ರಸಾರ ಮಾಡಲಾಗುತ್ತದೆ. ಇಸ್ರೋ ವೆಬ್ಸೈಟ್, ಯೂಟ್ಯೂಬ್, ಇಸ್ರೋದ ಫೇಸ್ಬುಕ್ ಪುಟ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರ ಪ್ರಸಾರ ಲಭ್ಯವಿರುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
‘ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ಒಂದು ಐತಿಹಾಸಿಕ ಕ್ಷಣವಾಗಿದ್ದು, ಇದು ಕುತೂಹಲವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಶದ ಯುವಜನರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹ ಹುಟ್ಟುಹಾಕುತ್ತದೆ. ನಾವು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪರಾಕ್ರಮವನ್ನು ಒಟ್ಟಾಗಿ ಆಚರಿಸುವಾಗ ಹೆಮ್ಮೆ ಮತ್ತು ಏಕತೆಯ ಆಳವಾದ ಅರ್ಥವನ್ನು ಉಂಟುಮಾಡುತ್ತದೆ. ಇದು ವೈಜ್ಞಾನಿಕ ವಿಚಾರಣೆ ಮತ್ತು ನಾವೀನ್ಯತೆಯ ವಾತಾವರಣವನ್ನು ಬೆಳೆಸಲು ಕೊಡುಗೆ ನೀಡುತ್ತದೆ’ ಎಂದು ಇಸ್ರೋ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.
‘ಈ ಐತಿಹಾಸಿಕ ಘಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ದೇಶದ ಎಲ್ಲ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಈ ಕಾರ್ಯಕ್ರಮವನ್ನು ಸಕ್ರಿಯವಾಗಿ ಪ್ರಚಾರ ಮಾಡಲು ಮತ್ತು ತಮ್ಮ ಆವರಣದೊಳಗೆ ಚಂದ್ರಯಾನ-3ರ ಸಾಫ್ಟ್ ಲ್ಯಾಂಡಿಂಗ್‌ನ ನೇರ ಪ್ರಸಾರ ಆಯೋಜಿಸಲು ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ’ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.