ಬೆಂಗಳೂರು : ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಳಿದಿರುವ ಜಾಗವನ್ನು ‘ಶಿವಶಕ್ತಿ’ ಎಂದು ಪ್ರಧಾನಿ ಘೋಷಣೆ ಮಾಡಿರುವುದರಲ್ಲಿ ತಪ್ಪೇನಿಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಹೇಳಿದ್ದಾರೆ.
ಕೇರಳದ ತಿರುವನಂತಪುರದ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇಡೀ ಭಾರತೀಯರಿಗೆ ಹೆಮ್ಮೆಯಾಗುವಂತೆ ಹೆಸರಿಟ್ಟು, ಅದರ ಸಂಫೂರ್ಣ ವಿವರಣೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಎನ್ಡಿಎಯನ್ನು’ಅಮಿಬಾ’ಗೆ ಹೋಲಿಸಿದ ಉದ್ಧವ್ ಠಾಕ್ರೆ
ಅಲ್ಲದೆ ಚಂದ್ರಯಾನ-2 ಪತನದ ಸ್ಥಳಕ್ಕೆ ‘ತಿರಂಗಾ ಪಾಯಿಂಟ್’ ಎಂದು ಹೆಸರನ್ನು ಸೂಚಿಸಿರುವುದು ಒಳ್ಳೆಯದಾಗಿದೆ ಎಂದು ಹೇಳಿದ್ದಾರೆ.
ಚಂದ್ರಯಾನ-3ರ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ, ನಾನೊಬ್ಬ ಅನ್ವೇಷಕನಾಗಿದ್ದೇನೆ. ನಾನು ಚಂದ್ರನನ್ನು, ಅಲ್ಲದೆ ನನ್ನ ಅಂತರಾಳವನ್ನೂ ಸಹ ಅನ್ವೇಷಿಸುತ್ತೇನೆ. ಆಧ್ಯಾತ್ಮ ಹಾಗೂ ವಿಜ್ಞಾನಗಳೆರಡೂ ನನ್ನ ಬದುಕಿನ ಪರಿಧಿಯ ಭಾಗಗಳಾಗಿವೆ. ಬ್ರಹ್ಮಾಂಡದಲ್ಲಿ ನನ್ನ ಅಸ್ತಿತ್ವದ ಅರ್ಥವನ್ನು ಶೋಧಿಸಲು ಪ್ರಯತ್ನಿಸುತ್ತೇನೆ. ವಿಜ್ಞಾನದ ಆಧಾರದಲ್ಲಿಯೇ ನನ್ನ ಅಸ್ತಿತ್ವಕ್ಕಾಗಿ ದೇವಸ್ಥಾನಗಳಿಗೂ ತೆರಳುತ್ತೇನೆ ಎಂದು ತಿಳಿಸಿದ್ದಾರೆ.
ಏನಿದು ಚಂದ್ರಯಾನ-3..?
ಇಡೀ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದ್ದ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಆಗಸ್ಟ್ 23ರಂದು ಸಂಜೆ 6:04 ಗಂಟೆಗೆ ಇಳಿದಿತ್ತು. ಈ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಖಚಿತಪಡಿಸಿತ್ತು. ಈ ಮೂಲಕ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಕೊನೆಗೂ ಫಲಿಸಿತ್ತು.
ವಿಕ್ರಂ ಲ್ಯಾಂಡರ್ ಲ್ಯಾಂಡ್ ಆದ ಮೂರು ಗಂಟೆಗಳವರೆಗೂ ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಾಗಿರಲಿಲ್ಲ. ಚಂದ್ರನ ಮೇಲೆ ಧೂಳು ಕಡಿಮೆ ಆದ ನಂತರವಷ್ಟೇ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಚ್ಚು ನೀರು ಸಿಗುವ ಸಾಧ್ಯತೆಯಿದೆ. ಹಾಗಾಗಿ, ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸಲಾಗಿತ್ತು.
615ಕೋಟಿ ರೂ. ಮೊತ್ತದ ಬೃಹತ್ ಯೋಜನೆಯಾಗಿರುವ ಇದರ ಯಶಸ್ಸಿಗೆ ಜಾಗತಿಕ ಮಟ್ಟದಲ್ಲಿಯೂ ಇಸ್ರೋ ಬಾಹ್ಯಾಕಾಶ ಸಂಸ್ಥೆಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ಶುಭಕೋರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.