ಮಂಡ್ಯ: ಇಸ್ರೋ ನೇತೃತ್ವದಲ್ಲಿ ಚಂದ್ರಯಾನ-3ರ ಯಶಸ್ವಿಯು ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇನ್ನು ಈ ಚಂದ್ರಯಾನ ಯೋಜನೆಯ ಹಿಂದೆ ವಿಜ್ಞಾನಿಗಳ ದೊಡ್ಡ ಪಾತ್ರವೂ ಇದ್ದು, ಈ ತಂಡದಲ್ಲಿ ಕನ್ನಡಗರೊಬ್ಬರು ಇರುವುದು ಹೆಮ್ಮೆಯ ವಿಷಯವಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಗ್ರಾಮದ ಯುವಕ ರವಿ.ಪಿ ಗೌಡ ಕೂಡ ಈ ತಂಡದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ನಮೆಲ್ಲರಿಗೂ ಅಭಿಮಾನ ತರುವ ವಿಚಾರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಶ್ಲಾಘಿಸಿದರು.
ಚಂದ್ರಯಾನ 3 ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಚಂದ್ರನ ಅಂಗಳ ಸ್ಪರ್ಶಿಸಿದೆ, ಮುಂದಿನ ಸಂಶೋಧನೆಗಳು ಇಡೀ ಜಗತ್ತಿಗೆ ಬೆಳಕು ಚೆಲ್ಲುವಂತಾಗಲಿ ಎಂದು ಶುಭ ಕೋರಿದರು. ಇದೊಂದು ಇಡೀ ಭಾರತೀಯರ ಹೆಮ್ಮೆ, ಈ ಸಾಧನೆಯಲ್ಲಿ ನೂರಾರು ವಿಜ್ಞಾನಿಗಳು, ತಂತ್ರಜ್ಞರ ಶ್ರಮ ಅಡಗಿದೆ ಎಂದರು.
ಇದನ್ನೂ ಓದಿ : ‘ಸಿಟಿ ರವಿಗೆ ಮರ್ಯಾದೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ’
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ರವಿ.ಪಿ ಗೌಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಚಂದ್ರಯಾನ 3 ಯಶಸ್ಸು ಭಾರತೀಯರ ಹೆಮ್ಮೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾದ ದಿನ. ಇಂಥದ್ದೊಂದು ಸಾಧನೆಯ ಹಿಂದೆ ವಿಜ್ಞಾನಿಗಳ, ತಂತ್ರಜ್ಞರ ದಣಿವರಿಯದ ಶ್ರಮವಿದೆ. ಕೋಟಿ ಕೋಟಿ ಭಾರತೀಯರ ಪ್ರಾರ್ಥನೆಯ ಫಲವಿದೆ. ಅದರಲ್ಲೂ ನನ್ನ ಕ್ಷೇತ್ರದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಗ್ರಾಮದ ಯುವಕ ರವಿ .ಪಿ ಗೌಡ ಅವರು ಹಿರಿಯ ವಿಜ್ಞಾನಿಯಾಗಿ ಈ ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ಅತ್ಯಂತ ಅಭಿಮಾನ ತಂದಿದೆ. ಇಸ್ರೋ ಚಂದ್ರಯಾನ 3 ತಂಡಕ್ಕೆ ಹಾಗೂ ಸಾಧನೆಯ ಭಾಗವಾಗಿರುವ ರವಿ.ಪಿ ಗೌಡ ಅವರಿಗೆ ವಿಶೇಷ ಅಭಿನಂದನೆಗಳು ಎಂದು ಶುಭಕೋರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.