ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕೀ ಇದ್ದು, ರಾಜಕೀಯ ಪಕ್ಷಗಳು ನಾಮಪತ್ರಸಲ್ಲಿಕೆ, ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿವೆ, ಇದರ ಮಧ್ಯೆ ನಿಮ್ಮ ಎಲ್ಲ ಕೆಲಸಗಳನ್ನು ಗಮನಿಸುತ್ತಿದ್ದೇವೆ ಎಂದು ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಬೆಂಗಳೂರಿನಲ್ಲಿ ಕೆಜಿಎಫ್ ಬಾಬು, ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗುರಪ್ಪ ನಾಯ್ಡು ಮನೆ ಮೇಲೆ ದಾಳಿ ನಡೆಸಿದೆ.
ಕೆಜಿಎಫ್ ಬಾಬು ನಿವಾಸ ರುಕ್ಸಾನಾ ಪ್ಯಾಲೇಸ್ನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ವಾಹನಗಳಲ್ಲಿ ಬನಶಂಕರಿ 2ನೇ ಹಂತಕ್ಕೆ ಬಂದ ಐಟಿ ಅಧಿಕಾರಿಗಳು ಗುರಪ್ಪನಾಯ್ಡು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಗುರಪ್ಪ ನಾಯ್ಡು ಜೊತೆ ಗುರುತಿಸಿಕೊಂಡಿದ್ದ ಬಸಪ್ಪ ಎಂಬುವರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಬಸಪ್ಪ ಜುವೆಲ್ಲರಿ ಶಾಪ್ ಹೊಂದಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ 50 ಕಡೆ ಹಲವಾರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗ್ತಿದೆ.
ಇನ್ನು ಐಟಿ ದಾಳಿ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎಲೆಕ್ಷನ್ ಹತ್ತಿರ ಬರ್ತಿದೆ, ಕಾಂಗ್ರೆಸ್ನವರನ್ನು ಹೆದರಿಸೋಕೆ ಏನು ಬೇಕಾದರೂ ಮಾಡಲಿ. ಅವರು ಏನೇ ಮಾಡಿದರೂ ನಾವು ರಾಜ್ಯದಲ್ಲಿ ಬದಲಾವಣೆ ತರುತ್ತೇವೆ ಎಂದು ತಿಳಿಸಿದರು.