ಲಡಾಖ್ : ದೇಶದ ಗಡಿ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಶುಕ್ರವಾರ ಲಡಾಖ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ವಿವಾದವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ದೇಶದ ಭೂ ಪ್ರದೇಶದ ಒಂದು ಇಂಚು ಕೂಡ ಚೀನಾ ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಸುಳ್ಳು. ಮೋದಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಚೀನಾ ಭಾರತದ ಪ್ರದೇಶವನ್ನು ತನ್ನ ವಶದಲ್ಲಿರಿಸಿಕೊಂಡಿದೆ ಎಂಬುವುದು ಲಡಾಖ್ ನ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಆದರೆ, ಆ ಬಗ್ಗೆ ಮಾತನಾಡಲು ಪ್ರಧಾನಿ ಸಿದ್ದರಿಲ್ಲ ಎಂದು ರಾಹುಲ್ ಕಿಡಿ ಕಾರಿದರು.
ಇದನ್ನೂ ಓದಿ : ಪ್ರಧಾನಿ ಮೋದಿಗೆ ಗ್ರೀಸ್‌ನ ಪ್ರತಿಷ್ಠಿತ ಪ್ರಶಸ್ತಿ!
ಒಂಬತ್ತು ದಿನಗಳ ಲಡಾಖ್ ಪ್ರವಾಸದ ಕೊನೆಯ ದಿನ ರಾಹುಲ್ ಜನರನ್ನು ಉದ್ದೇಶಿಸಿ ಮಾತನಾಡಿದರು. ಆಗಸ್ಟ್ 19ರಂದು ರಾಹುಲ್ ಲಡಾಖ್ ನ ಪ್ರಸಿದ್ಧ ಪ್ಯಾಂಗಾಂಗ್ ಸರೋವರ ಪ್ರದೇಶಕ್ಕೆ ಬೈಕ್ ರೈಡ್ ಮಾಡಿ ಗಮನ ಸೆಳೆದಿದ್ದರು. ಮರುದಿನ ಆಗಸ್ಟ್ 20ರಂದು ಅದೇ ಪ್ಯಾಂಗಾಂಗ್ ಸರೋವರದ ಬಳಿ ತಮ್ಮ ತಂದೆ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಜನ್ಮದಿನವನ್ನು ಆಚರಿಸಿದ್ದರು.
ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದುಗೊಂಡ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಲಡಾಕ್ ಗೆ ಭೇಟಿ ನೀಡಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕಿತ್ತಾಟ ನಡೆಯುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.