ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ನನಗೆ ಟಿಕೆಟ್ ಸಿಗಲಿದೆ, ಎರಡು ದಿನ ಕಾದು ನೋಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಟಿಕೆಟ್ ಸಿಗುತ್ತದೆ ನೋಡಿ, ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ, ನನ್ನ ಮಗನ ಹೆಸರು ಕೂಡ ಹೇಳಿಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸುದೀರ್ಘ ಸಭೆ ಆಗಿದೆ. ನಡ್ಡಾ ಜೊತೆ ಮಾತ್ರ ಸಭೆ ಸಕಾರಾತ್ಮಕವಾಗಿ ಆಗಿದ್ದು, ನನ್ನ ಅಭಿಪ್ರಾಯ ಎಲ್ಲ ಮುಕ್ತವಾಗಿ ಹೇಳಿದ್ದೇನೆ, ಬುಧವಾರ ಸಂಜೆಯವರೆಗೂ ಸಭೆ ನಡೆದಿದ್ದು, ಹೀಗಾಗಿ ಎರಡನೇ ಪಟ್ಟಿಯಲ್ಲಿ ಹೆಸರಿಲ್ಲ. ಅದು ಸಹಜ ಅದರಲ್ಲಿ ವಿಶೇಷ ಇಲ್ಲ. ಆದರೆ ನನಗೆ ಟಿಕೆಟ್ ಸಿಗುತ್ತದೆ ನೋಡಿ ನೀವು ಎಂದು ಭರವಸೆ ವ್ಯಕ್ತಪಡಿಸಿದರು.
ಟಿಕೆಟ್ ಘೋಷಣೆಯಾಗದ ಕಾರಣಕ್ಕೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.