ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದಾರೆ. ಶೆಟ್ಟರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರನ್ನು ಎದುರಿಸಲಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ತೊರೆದಿದ್ದು, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಸಮ್ಮುಖದಲ್ಲಿ ಶೆಟ್ಟರ್ ಕೈ ಪಕ್ಷಕ್ಕೆ ಮೊನ್ನೆಯಷ್ಟೇ ಸೇರಿದ್ದಾರೆ.
ಸೇರ್ಪಡೆ ನಂತರ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್ ಮಾತನಾಡಿ, ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೇನೆ. ಬಿಜೆಪಿ ನನಗೆ ಎಲ್ಲ ಸ್ಥಾನಮಾನ ನೀಡಿದೆ ಮತ್ತು ಪಕ್ಷದ ಕಾರ್ಯಕರ್ತನಾಗಿದ್ದ ನಾನು ಪಕ್ಷದ ಬೆಳವಣಿಗೆಗೆ ಸದಾ ದುಡಿದಿದ್ದೇನೆ’ ಎಂದು ತಿಳಿಸಿದ್ದರು. ಹಿರಿಯ ನಾಯಕನಾಗಿದ್ದ ನನಗೆ ಟಿಕೆಟ್ ಸಿಗುತ್ತದೆ ಎಂದೇ ಭಾವಿಸಿದ್ದೆ. ಆದರೆ, ಸಿಗುತ್ತಿಲ್ಲ, ಯಾರೂ ನನ್ನ ಬಳಿ ಮಾತನಾಡಿಲ್ಲ, ಮನವೊಲಿಸುವ ಪ್ರಯತ್ನ ಮಾಡಿಲ್ಲ, ನನಗೆ ಯಾವ ಸ್ಥಾನ ಸಿಗಲಿದೆ ಎಂಬ ಭರವಸೆ ನೀಡಿಲ್ಲ’ ಎಂದು ಹೇಳಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ