ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಗಳಕ್ಕೆ ಕೊನೆ ಇಲ್ಲದಂತಾಗಿದ್ದು, ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇದೇ ವಿಚಾರವಾಗಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
ಡಿ ರೂಪಾ, ರೋಹಿಣಿ ಸಿಂಧೂರಿ ಜಗಳ ಎಲ್ಲರಿಗೂ ಮುಜುಗರ ತರಿಸುತ್ತಿದ್ದು, ದೊಡ್ಡ ಹುದ್ದೆಯಲ್ಲಿರುವವರ ಈ ರೀತಿಯ ಕಿತ್ತಾಟ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಇಬ್ಬರೂ ಉನ್ನತ ಅಧಿಕಾರಿಗಳಿಗೆ ಬುದ್ಧಿ ಹೇಳಬೇಕು ಎಂದು ತಮ್ಮ ಟ್ವೀಟ್ ನ್ನು ಮೋದಿ ಮತ್ತು ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ ವಿನಂತಿಸಿದ್ದಾರೆ.
ಐಪಿಎಸ್ ಮತ್ತು ಐಎಎಸ್ ಎರಡೂ ಹುದ್ದೆಗಳು ಜನರಿಗೆ ಮಾರ್ಗದರ್ಶನ ನೀಡುವ ಅತ್ಯಂತ ಜವಾಬ್ದಾರಿ ಸ್ಥಾನಗಳಾಗಿವೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತವೆ. ವೈಯಕ್ತಿಕ ದ್ವೇಷವನ್ನು ಮಾಧ್ಯಮಗಳ ಮುಂದೆ ತರಬಾರದು.
ಸಾರ್ವಜನಿಕವಾಗಿ ಘನತೆಯನ್ನು ಕಾಪಾಡಿಕೊಳ್ಳಬೇಕೆಂದು ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ವಿನಂತಿಸುವುದಾಗಿ ಹೇಳಿದ್ದಾರೆ.