ನವದೆಹಲಿ: ಬಹುಕಾಲದಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕಾರವಾಗಲಿದ್ದು, ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಸ್ವಾಗತಿಸಿದೆ. ಸಂವಿಧಾನ ತಿದ್ದುಪಡಿ ಮಸೂದೆಯು ಒಮ್ಮೆ ಅಂಗೀಕಾರವಾದರೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಖಚಿತಪಡಿಸಲಾಗುತ್ತದೆ.
ಮಹಿಳೆಯರಿಗೆ ಶಾಸಕಾಂಗ ಮೀಸಲಾತಿ ಒದಗಿಸುವ ಮಸೂದೆಯನ್ನು ಅಂಗೀಕರಿಸಲು ‘ಬೇಷರತ್ ಬೆಂಬಲ’ ನೀಡುವ ಕುರಿತು ಕಾಂಗ್ರೆಸ್ ಸಂಸದರು ಬರೆದಿರುವ ಹಳೆಯ ಪತ್ರವನ್ನು ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ 2018 ರಲ್ಲಿ ಟ್ವೀಟ್ ಮಾಡಿದ್ದರು. ಈಗ ಅದನ್ನು ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಮಹಿಳಾ ಮೀಸಲಾತಿ ಮಸೂದೆಗೆ ಮೋದಿ ಸಂಪುಟ ಗ್ರೀನ್ ಸಿಗ್ನಲ್!
ರಾಹುಲ್ ಗಾಂಧಿ ಮಾಡಿರುವ ಟ್ವೀಟ್‌ನಲ್ಲಿ ‘ನಮ್ಮ ಪ್ರಧಾನಿ ಅವರು ಮಹಿಳಾ ಸಬಲೀಕರಣದ ಹೋರಾಟಗಾರ ಎಂದು ಹೇಳುತ್ತಾರೆ? ಅವರು ಪಕ್ಷ ರಾಜಕೀಯದಿಂದ ಮೇಲೇರಲು, ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮತ್ತು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಮಯ ಬಂದಿದೆ’ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ : ಚೈತ್ರಾ ವಂಚನೆ ಕೇಸ್ : ವಿನಯ್ ಗುರೂಜಿ, ವಿಹೆಚ್ಪಿ, ಭಜರಂಗದಳ ಮುಖಂಡರಿಗೆ ಸಿಸಿಬಿ ನೋಟಿಸ್
ಮಹಿಳೆಯರ ಶಾಸಕಾಂಗ ಮೀಸಲಾತಿಗಾಗಿ ಕಾನೂನನ್ನು ರೂಪಿಸಲು 1996 ರಿಂದ ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ, ಆ ಎಲ್ಲ ಪ್ರಯತ್ನಗಳು ವಿಫಲವಾಗುತ್ತಲೇ ಬಂದಿತ್ತು. 2010 ರಲ್ಲಿ ಯುಪಿಎ ಸರ್ಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು. ಆದರೆ, ಮಿತ್ರಪಕ್ಷಗಳ ಕೆಲವು ಒತ್ತಡದಿಂದಾಗಿ ಲೋಕಸಭೆಯಲ್ಲಿ ಅದನ್ನು ಮಂಡಿಸಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಮಸೂದೆಯನ್ನು ಹೇಗೆ ಬೆಂಬಲಿಸಿತ್ತು ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ಅದನ್ನು ‘ಐತಿಹಾಸಿಕ ಮತ್ತು ಮಹತ್ವಪೂರ್ಣ’ ಎಂದು ಕರೆದಿದ್ದರು ಎಂಬುದನ್ನು ಕೂಡ ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ʼವಿಶ್ವ ಪಾರಂಪರಿಕ ತಾಣʼಗಳ ಪಟ್ಟಿಗೆ ಹೊಯ್ಸಳರ ದೇವಾಲಯಗಳು
ಸಂಸತ್ತಿನ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷದ ನಾಯಕರು ಮಹಿಳಾ ಮೀಸಲಾತಿಗೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಂಸತ್ತಿನಲ್ಲಿ ಕೇವಲ 14% ಮಹಿಳೆಯರಿದ್ದಾರೆ. ರಾಜ್ಯ ವಿಧಾನಸಭೆಗಳಲ್ಲಿ ಅವರ ಸಂಖ್ಯೆ ಕೇವಲ 10% ಆಗಿದೆ ಎಂದು ಚುನಾಯಿತ ಪ್ರತಿನಿಧಿಗಳ ಲಿಂಗಾನುಪಾತದ ಬಗ್ಗೆ ಹೇಳಿದ್ದರು. ಈಗ ಹೊಸ ಮಸೂದೆಯಲ್ಲಿ ಮೀಸಲಾತಿಯ ವ್ಯಾಪ್ತಿಯು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿಯನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.