ಬೆಂಗಳೂರು: ಬಸವಣ್ಣನವರ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡಿದ್ದೇನೆ. ಜಾತಿ,ಮತ, ಬೇಧ, ಭಾವ ಇಲ್ಲದೇ ಮೇಲು ಕೇಳು ಇಲ್ಲದ ಹಾಗೆ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿದ್ದು,ಬಸವಣ್ಣನವರ ಸ್ಮರಣೆ ಮಾಡುತ್ತಾ ಸಾರ್ವಜನಿಕ ಬದುಕಿಗೆ ಬರುತ್ತಿದ್ದೇನೆ. ಬಿಜೆಪಿ ಜೊತೆ ನಾನು ಬಾಂಧವ್ಯವನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. ನಾನು ಕಷ್ಟದಲ್ಲಿ ಇದ್ದಾಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ, ನಮ್ಮವರೇ ನನ್ನನ್ನು ಮುಗಿಸುವ ಪ್ರಯತ್ನ ಮಾಡಿದ್ದರು ಎಂದು ಬೇಸರಿಸಿದರು.
ನಿಮ್ಮದೇ ಪಕ್ಷ ಇದ್ದರೂ ಯಾಕೆ ಹೀಗೆ ಆಗುತ್ತಿದೆ? ಸಿಬಿಐ, ಪೊಲೀಸ್ ಎಲ್ಲಾ ಸರ್ಕಾರದ ಕೈಯಲ್ಲಿ ಇದೆ ಅಂತಾರೆ. ಹೀಗಿದ್ದರೂ ಯಾಕೆ ನಿಮಗೆ ಹುಟ್ಟೂರಿನಲ್ಲಿ ಇರಲು ಬಿಡುವುದಿಲ್ಲ? ನಿಮ್ಮ ಜೊತೆಯಾಗಿ ಶಕ್ತಿಯಾಗಿ ನಾವು ಇರುತ್ತೇವೆ. ಮತ್ತೆ ಸಾರ್ವಜನಿಕ ಜೀವನಕ್ಕೆ ಬನ್ನಿ ಎಂದು ಜನ ಹೇಳಿದ್ದರು. ಈ ಕಾರಣಕ್ಕೆ ನಾನು ಹೊಸ ಪಕ್ಷವನ್ನು ಸ್ಥಾಪಸಿದ್ದೇನೆ ಎಂದು ಹೇಳಿದರು.
ನನ್ನ ಹೆಲಿಕಾಪ್ಟರ್ ಯಾವತ್ತು ಅನಾಥವಾಗಿರಲಿಲ್ಲ. ಮಕ್ಕಳಿಗೆ ಕಷ್ಟ ಗೊತ್ತಾಗಬೇಕು ಅಂತ ಹೆಲಿಕಾಪ್ಟರ್ ಬಳಕೆ ಮಾಡಿಸಿಕೊಂಡಿರಲಿಲ್ಲ ಎಂದು ತಿಳಿಸಿದರು.