ಬಳ್ಳಾರಿ : ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕೆಂಬುದು ಜನಾರ್ದನ ರೆಡ್ಡಿಯವರ ಬಯಕೆ. ತಾವು ಹುಟ್ಟಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ ಎಂದು ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಹೇಳಿದರು.
ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರುಣಾ ಲಕ್ಷ್ಮಿ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿ ಮಾತನಾಡಿದರು. ರೆಡ್ಡಿಯವರಿಗೆ ಕೋರ್ಟ್ ನಿರ್ಬಂಧ ಇರುವುದರಿಂದ ನಾನು ಬೆಣಕಲ್ ಗ್ರಾಮಕ್ಕೆ ಬಂದಿದ್ದೇನೆ. ಕುರುಬ ಸಮಾಜದ ಜನರ ಆಶೀರ್ವಾದ ನಮ್ಮ ಮೇಲಿದ್ದರೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂಬುದು ನನ್ನ ಪತಿಯ ನಂಬಿಕೆ. ಹಾಗಾಗಿ, ಬಾವುಟ ಬಿಡುಗಡೆ ಕಾರ್ಯಕ್ರಮವನ್ನು ಕುರುಬ ಸಮಾಜದವರೊಂದಿಗೆ ಸೇರಿ ಚಾಲನೆ ನೀಡಲಾಯಿತು’ ಎಂದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿ ಕಳೆದ ಕೆಲ ದಿನಗಳ ಹಿಂದಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಎಂಬ ಹೊಸ ಪಕ್ಷ ಘೋಷಿಸಿದ್ದರು. ಇದೀಗ ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಪಕ್ಷದ ಬಾವುಟವನ್ನು ಇಂದು ಅಧಿಕೃತವಾಗಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆಗೊಳಿಸಿದ್ದಾರೆ.
ಜನಸೇವೆ ಮಾಡಬೇಕೆಂದು ಪಕ್ಷ ಕಟ್ಟಿದ್ದಾರೆ. ರೆಡ್ಡಿಯನ್ನು ಜನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ತಂದೆ-ತಾಯಿ, ಬಂಧು ಬಳಗ ಎಲ್ಲವೂ ನೀವೇ. ನಿಮ್ಮನ್ನು ಬಿಟ್ಟು ನಮಗೆ ಯಾರೂ ಇಲ್ಲ ಎಂದರು. ಗಾಲಿ ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದರು. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಮೂಲಕ ಮುಂದೆ ಬರುವ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದರು