ಕಲಬುರಗಿ: ‘ಹುಲಿ ಬೋನ್‌ನಲ್ಲಿ ಇದ್ರೂ ಹುಲಿನೇ, ಕಾಡಲ್ಲಿ ಇದ್ರೂ ಹುಲಿನೇ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಗುಡುಗಿದ್ದಾರೆ.
ಸೇಡಂ ಪಟ್ಟಣಕ್ಕೆ ಪ್ರಚಾರಕ್ಕೆ ಹೋಗಿದ್ದ ವೇಳೆ ಮಾತನಾಡಿ, ನನ್ನ ಮೇಲೆ ಸುಳ್ಳು ಕೇಸ್ ಹಾಕಿ ಜನರು ನಂಬುವ ರೀತಿಯಲ್ಲಿ ಮೋಸ ಮಾಡಿದ್ರು, ನಾನು ಅಧಿಕಾರದಲ್ಲಿ ಇರುವಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸ್ಪೀಡ್ ನೋಡಿದ ಎಲ್ಲರಿಗೂ ಗಾಬರಿ ಆಗಿದ್ದರು. ಯಡಿಯೂರಪ್ಪ ನಂತರ ಯಾರು ಯಾರು ಮುಖ್ಯಮಂತ್ರಿ ಆಗಬೇಕು ಅಂತ ಆಸೆ ಇಟ್ಕೊಂಡಿದ್ರೋ ಅವರೆಲ್ಲರೂ ಸೇರಿ ನನ್ನ ರಾಜಕೀಯ ಶತ್ರುಗಳ ಜತೆ ಕೈ ಜೋಡಿಸಿದರು.
ರಾಜಕೀಯ ಅಂದ್ರೆನೆ ತಂತ್ರ, ಕುತಂತ್ರ, ಮೋಸ, ದ್ವೇಷ, ಸುಳ್ಳು, ಜನಾರ್ದನ ರೆಡ್ಡಿಗೆ ಆ ತರಹದ ನೀಚ ರಾಜಕೀಯ ಗೊತ್ತಿರಲಿಲ್ಲ ಎಂದು ತಿಳಿಸಿದರು. ಜನಾರ್ದನ ರೆಡ್ಡಿಗೆ ಸಿಬಿಐ ಶಾಕ್ ಅಂತ ಮಾಧ್ಯಮದಲ್ಲಿ ಬರ್ತಿದೆ. ಆದ್ರೆ, ಸಿಬಿಐ ಶಾಕ್ ಗೆ ನಾನು ಹೆದರೋನು ಅಲ್ಲ, ಬೆದರೋನೂ ಅಲ್ಲ. ನನ್ನಿಂದ ನಿಮಗೆ ಶಾಕ್ ಹೊಡಿಬೇಕೇ ಹೊರತು ಯಾರಿಂದಲೂ ನನಗೆ ಶಾಕ್ ಆಗುವ ಪ್ರಶ್ನೆಯೇ ಬರಲ್ಲ.
ಇನ್ಮುಂದೆ, ನನ್ನಿಂದಲೇ ಬಹಳ ಜನ ಶಾಕ್ ಅನುಭವಿಸ್ತಾರೆ ಎಂದು ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲ್ಲ. ಈ ರಾಜ್ಯವನ್ನು ಕಲ್ಯಾಣ ರಾಜ್ಯ ಮಾಡುವವರೆಗೆ ನಾನು ಜೀವ ಬಿಡಲ್ಲ ಎಂದು ತಿಳಿಸಿದರು.