ಬೆಂಗಳೂರು: ”ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ನಾಳೆ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ, ಮಾಧ್ಯಮಗಳ ಜೊತೆಗೆ ಮಾತನಾಡಿದರು. ನಾಳೆಯಿಂದ ಚಾಮರಾಜನಗರ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಲ್ಲಿ ಏ.12ರವರೆಗೂ ಪ್ರಚಾರ ಮಾಡುತ್ತೇನೆ. ಏ.13ರಿಂದ 20ರವರೆಗೂ ನಾಮಪತ್ರ ಸಲ್ಲಿಕೆಗೆ ಹೋಗುತ್ತೇನೆ.
ಇನ್ನು ಏ.21 ರಿಂದ 24ರವರೆಗೂ ರಾಮನಗರ, ಚನ್ನಪಟ್ಟಣ ಕನಕಪುರದಲ್ಲಿ ಪ್ರಚಾರ ಮಾಡುತ್ತೇನೆ. ಸಮಯ ವ್ಯಯ ಮಾಡದೇ ಕೆಲಸ ಮಾಡಲಾಗುವುದು” ನಾನು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ. ನಾನು ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ. ಒಂದು ಕ್ಷೇತ್ರದಲ್ಲಿ ಮಾತ್ರ ನಾನು ಸ್ವರ್ಧೆ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಇನ್ನೂ ಜೆಡಿಎಸ್ ಬಿಟ್ಟ ನಾಯಕರ ಬಗ್ಗೆ ಮಾತನಾಡಿ, ‘ನಾನು ಯಾರನ್ನೂ ಹೊರಗೆ ಹಾಕಿಲ್ಲ. ಹಾಸನಕ್ಕೆ ಸಂಬಂಧಿಸಿದ ನಿರ್ಣಯ ನಾನು ಮಾಡಿಲ್ಲ. ಕಳೆದ ಎರಡು ವರ್ಷದ ರಾಜಕೀಯ ಹೇಗೆ ನಡೆದಿದೆ ಅಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ.
ರಾಮಸ್ವಾಮಿ ಹಾಗೇ ಹೇಳಿರಬೇಕು. ಗುಬ್ಬಿ ಶ್ರೀನಿವಾಸ್ ಕೂಡಾ ಅದೇ ಹೇಳಿದ್ದು ಅಲ್ಲವೇ?. ಘಟನೆಗೆ ಏನಾದರೂ ಕಾರಣ ಹೇಳಬೇಕು ಅದಕ್ಕೆ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಏನಾಗಿದೆ ಅಂತ ಗೊತ್ತಿದೆ” ಎಂದರು. ಪೂಜೆಯ ವೇಳೆ ಬಸವನಗುಡಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅಮ್ಮನವರ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.