ಬೆಂಗಳೂರು: ಚುನಾವಣೆ ದೃಷ್ಠಿಯಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊನೆಗೂ ತೆರೆ ಎಳೆದಿದ್ದಾರೆ. ಹಾಸನದಲ್ಲಿ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಜೆಡಿಎಸ್ ಇಂದು ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಇತ್ತ ಹಾಸನಕ್ಕೆ ಸ್ವರೂಪ್ ಹೆಸರು ಘೋಷಣೆಯಾಗ್ತಿದ್ದಂತೆ ಬೆಂಬಲಿಗರು ಸ್ವರೂಪ್ ಮನೆ ಮುಂದೆ ಸಿಹಿ ಹಂಚಿ ಸಂಭ್ರಮಿಸಿದರು.
ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸ್ವರೂಪ್ ಹೆಸರಿದ್ದು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಡೆಸಿದ ಪ್ರಯತ್ನ ವಿಫಲವಾಗಿದೆ. ಕೊನೆಗೂ ಭವಾನಿ ರೇವಣ್ಣಗೆ ಟಿಕೆಟ್ ಸಿಕ್ಕಿಲ್ಲ, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡೋದಾಗಿ ಹೇಳಿದ್ದ ಮಾಜಿ ಸಿಎಂ ಹೆಚ್ ಡಿಕೆ ಕೊನೆಗೂ ಸ್ವರೂಪ್ ಹೆಸರು ಘೋಷಿಸಿಯೇ ಬಿಟ್ಟಿದ್ದಾರೆ .
ಎಚ್ ಡಿ ರೇವಣ್ಣ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಲು ಕಡೆ ಕ್ಷಣದ ಕಸರತ್ತು ನಡೆಸಿದರೂ ಪ್ರಯೋಜನವಾಗಿಲ್ಲ, ಸ್ವರೂಪ್ ಅವರಿಗೇ ಟಿಕೆಟ್ ನೀಡಬೇಕು ಎಂಬುದು ಕುಮಾರಸ್ವಾಮಿ ಅವರ ಇಚ್ಛೆಯಾಗಿತ್ತು. ಹಾಸನ ಟಿಕೆಟ್ ವಿಚಾರವಾಗಿ ಉದ್ಭವವಾಗಿದ್ದ ಗೊಂದಲ, ಭಿನ್ನಾಭಿಪ್ರಾಯ ಶಮನಗೊಳಿಸಲು ದೊಡ್ಡಗೌಡರ ಎಂಟ್ರಿಯಾಗಿದ್ದರೂ ಪರಿಹಾರ ಸಿಕ್ಕಿರಲಿಲ್ಲ.