ಶಿವಮೊಗ್ಗ: ರಾಜ್ಯದಲ್ಲಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನ ಕಿತ್ತೊಗೆಯಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಉಸ್ತುವಾರಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಚಂದ್ರು ಅವರು, ಶಿವಮೊಗ್ಗ ನಾಲ್ವರು ಸಿಎಂಗಳನ್ನು ಕಂಡಿದೆ. ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆದರೂ ಕಾರಣಾಂತರಗಳಿಂದ ಒಮ್ಮೆಯೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಬಿಜೆಪಿಯದ್ದು ಬೊಗಳೆ ಸರ್ಕಾರವಾಗಿದ್ದು ಕಿತ್ತಾಡುವ ಕಾಂಗ್ರೆಸ್ ಮತ್ತು ಎಲ್ಲಿ ಬೇಕಾದರೂ ರಾಜಿ ಆಗುವ ಜೆಡಿಎಸ್‌ನಿಂದ ರಾಜ್ಯದ ಜನರು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಹಾಗಾಗಿ ಜನರು ಹೊಸ ಆಯ್ಕೆಯನ್ನು ಹುಡುಕುತ್ತಿದ್ದಾರೆ ಎಂದರು.
ಬಳಿಕ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ದಿವಾಕರ್ ಮಾತನಾಡಿ, ಜಿಲ್ಲೆಯ ಎಲ್ಲಾ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುವರು. ಪಕ್ಷ ಅಧಿಕಾರಕ್ಕೆ ಬಂದರೆ ಭದ್ರಾವತಿಯಲ್ಲಿನ ಸಾರ್ವಜನಿಕ ಉದ್ಯಮಗಳನ್ನು ಉಳಿಸಲು ಪ್ರಯತ್ನ ಮಾಡುತ್ತೇವೆ. ಯಾರಿಗೂ ಹಣ ಹಂಚದೇ ಚುನಾವಣೆ ಮಾಡುತ್ತೇವೆ. ಯಾವುದೇ ಕೆಲಸಗಳಿಗೂ ಕಮೀಷನ್ ಪಡೆಯುವುದಿಲ್ಲ ಎಂದರು. ಇನ್ನು ರಾಜ್ಯಸಭೆ ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಹಿರಿಯ ಚಿತ್ರನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.