ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ ಹೇಳಿಕೊಂಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ಪಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗಲಿದೆ ಎಂದಿದ್ದಾರೆ.
ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ನಮ್ಮ ಕೈತಪ್ಪಿ ಹೋಗಿದ್ದರಿಂದ ಅನೇಕ ಕೆಲಸ ಕಾರ್ಯಗಳು ಹಾಗೆಯೇ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ. ಮುಂದಿನ 90 ದಿನಗಳಲ್ಲಿ ಚುನಾವಣೆ ಮುಗಿದು ಹೋಗಲಿದ್ದು, ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ರೇವಣ್ಣ ಅವರು ಇಂಧನ ಮಂತ್ರಿಯಾಗಿದ್ದಾಗ ಅನುಕೂಲ ಮಾಡಿಕೊಟ್ಟಿದ್ದಾರೆ ಅಂತ ಈಗ ಗೊತ್ತಾಯ್ತು. ಅವರು ಮಂತ್ರಿಯಾಗಿದ್ದಾಗ ಇಡೀ ಜಿಲ್ಲೆಯ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಶ್ರಮಿಸುತ್ತೇನೆ ನಿಮ್ಮ ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದರು. ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ನನಗೂ ಒಳ್ಳೆಯದು, ಅನುಕೂಲ ಆಗಲಿದೆ. ಅದಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕೆಲಸ ಮಾಡಲು, ಭಗವಂತ ನನಗೆ ಆಶೀರ್ವಾದ ಮಾಡಲಿ ಎಂದು ಬೇಡುವೆ. ಮತ್ತೊಮ್ಮೆ ಈ ಊರಿಗೆ ಬರುವೆ, ನಿಮ್ಮನ್ನು ಮತ್ತೆ ಭೇಟಿ ಮಾಡುವೆ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.ಮೊನ್ನೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ಹೆಚ್ ಡಿ ಕುಮಾರಸ್ವಾಮಿ ಟಿಕೆಟ್ ಪಡೆದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡಬೇಕು. ಯಾರು ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವುದಿಲ್ಲವೋ ಅಂತ ಅಭ್ಯರ್ಥಿಗಳನ್ನು ಕೈಬಿಡಲಾಗುತ್ತದೆ. ಈ ಬಗ್ಗೆ ಅಭ್ಯರ್ಥಿಗಳಿಗೂ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದರು.