ರಾಮನಗರ: ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಹಗುರವಾಗಿ ಮಾತನಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಒಬ್ಬ ವಿದೂಷಕ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂತೋಷ್ ಜೀ ಪಂಚೆಯ ಬಗ್ಗೆ ಹಗುರ ಮಾತನಾಡಿರುವುದು ಖಂಡನಾರ್ಹ. ಸಂಪ್ರದಾಯದಂತೆ ನಾವು ಪಂಚೆ ಧರಿಸುತ್ತೇವೆ ಇದರಲ್ಲಿ ತಪ್ಪೇನೀದೆ ಎಂದು ಪ್ರಶ್ನಿಸಿದರು. ಜೆಡಿಎಸ್ ಅಧ್ಯಕ್ಷ ಇಬ್ರಾಹಿಂಗೆ ಸೀರಿಯಸ್‌ನೆಸ್ ಇಲ್ಲ. ಅವರೊಬ್ಬ ಕಾಮಿಡಿಯನ್ ಆಗಿದ್ದಾರೆ , ಚುನಾವಣೆ ಸಂದರ್ಭದಲ್ಲಿ ಕಣ್ಣೀರು ಹಾಕಿ ಜನರ ಮುಂದೆ ಭಾವನಾತ್ಮಕವಾಗಿ ಮತ ಕೇಳುವುದು ಕುಮಾರಸ್ವಾಮಿ ಅವರ ಚಾಳಿಯಾಗಿದೆ.
ರಾಜ ಮನೆತನದ ರೀತಿ ಒಂದೇ ಕುಟುಂಬದವರು ಸ್ಪರ್ಧೆ ಮಾಡುತ್ತಾರೆನ್ನುವ ಮೂಲಕ ಜೆಡಿಎಸ್‌ನ ವಂಶಪಾರಂಪರ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಸಂತೋಷ್ ಜೀ ಉಲ್ಲೇಖ ಮಾಡಿದ್ದಾರೆ. ಇದರಲ್ಲಿ ತಪ್ಪೇನಿಲ್ಲ ಎಂದರು.ಸಾಮಾನ್ಯ ಕುಟುಂಬದಿಂದ ಬಂದ ಸಂತೋಷ್ ಜೀ, ಇಡೀ ದೇಶದಲ್ಲಿ ಅವರು ಪರಿಚಿತರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅವರ ಬಗ್ಗೆ ಅಪಾರವಾದ ಗೌರವವಿದೆ. ಸಂತೋಷ್ ಜೀ ಬಗ್ಗೆ ಕುಮಾರಸ್ವಾಮಿ ಅಗೌರವದಿಂದ ಮಾತನಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ವಂಶಪಾರಂಪರ್ಯಕ್ಕೆ ತೀಲಾಂಜಲಿ ಹಾಕೋದೆ ಬಿಜೆಪಿಯ ಅಜೆಂಡಾ. ನಮ್ಮ ಪಕ್ಷದಲ್ಲಿ ಕೆಲವೊಂದು ಸಂದರ್ಭಕ್ಕೆ ಯೋಗ್ಯತೆ ಅನುಗುಣವಾಗಿ ಟಿಕೆಟ್ ಕೊಡ್ತಾರೆ. ಆದರೆ ಜೆಡಿಎಸ್‌ನಂತೆ ರಾಜಮನೆತನ ರೀತಿ, ವಂಶಪಾರಂಪರ್ಯವಾಗಿ ಟಿಕೆಟ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.