ಬೆಂಗಳೂರು : ಶರಣಗೌಡ ಕಂದಕೂರ ನಮ್ಮನೇ ಹುಡುಗ. ಹಿಂದಿನ ಕೆಲವು ಘಟನೆಗಳಿಂದ ಆ ರೀತಿ ಹೇಳಿಕೊಂಡಿದ್ದಾರೆ. ಮೈತ್ರಿ ವಿಚಾರದಲ್ಲಿ ಅವರ ಹೇಳಿಕೆಗಳಿಗೆ ಸ್ಫೋಟವಾಗುವಂತದ್ದು ಏನಿಲ್ಲ. ನಮಗೆ ಹಿಂದೆ ಅನ್ಯಾಯವಾಗಿದೆ ಎಂಬ ಮನಸ್ಥಿತಿಯಲ್ಲಿ ಮಾತನಾಡಿದ್ದಾರೆ. ಅದೇನು ದೊಡ್ಡ ವಿಷಯವೇನಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿಗೆ ಸಹಮತವಿಲ್ಲ ಎಂದಿದ್ದ ಜೆಡಿಎಸ್ ಶಾಸಕ ಶರಣುಗೌಡ ಕಂದಕನೂರ ಹೇಳಿಕೆಗೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ನಮ್ಮನೆಯ ವಿಷಯವನ್ನು ನಾವು ಸರಿಪಡಿಸುತ್ತೇವೆ. ಅವರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಸರಿಪಡಿಸುವುದಾಗಿ ತಿಳಿಸಿದರು.
ಇದನ್ನೂ ಓದಿ : EXCLUSIVE – ಮೈತ್ರಿ ಘೋಷಿಸಿ ಕೈ ತೊಳೆದುಕೊಂಡ್ರಾ ಬಿಎಸ್‌ವೈ?
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಸೀಟ್ ಅತಂತ್ರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಬಿಜೆಪಿ ಜೊತೆಗೆ ಸೀಟ್ ಹಂಚಿಕೆಯ ಕುರಿತು ಇನ್ನೂ ಚರ್ಚೆಯೇ ಆಗಿಲ್ಲ. ಇದೆಲ್ಲವೂ ಪ್ರಾಥಮಿಕ ಹಂತದ ವಿಷಯವಾಗಿದೆ. ಅವರು ಅತಂತ್ರ ಆದರೂ, ಇವರು ಅತಂತ್ರ ಆದರೂ ಎಂದು ಊಹೆ ಮಾಡಿಕೊಂಡರೇ ಹೇಗೆ ಎಂದು ಪ್ರಶ್ನಿಸಿದರು.
ನನ್ನ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳು ಚರ್ಚೆಯಾಗಬೇಕು. ಅನ್ ಅಫಿಸಿಯಲಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ರೈತರ ಬಗ್ಗೆ ನನಗೆ ಚಿಂತನೆಯಿದೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಸೈದ್ಧಾತಿಂಕ ವಿಚಾರವನ್ನು ಮುಂದಿಟ್ಟುಕೊಂಡು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಾವ ಸಿದ್ದಾಂತ, ನಿನ್ನೆ ಬಿ.ಕೆ ಹರಿಪ್ರಸಾದ್ ಏನು ಭಾಷಣ ಮಾಡಿದ್ದರು? ಯಾರ ಬಗ್ಗೆ ಮಾತನಾಡಿದ್ದರು? ಬಿಜೆಪಿ ಸೇರೋಕೆ ಯಾರು ಅಡ್ವಾಣಿಯರನ್ನು ಭೇಟಿ ಮಾಡಿದ್ದರು? ಈಗ ಅವರನ್ನೆ ಸಿಎಂ ಮಾಡಿಕೊಂಡು ಕುಳಿತಿಲ್ಲವಾ ಎಂದು ಕೆಂಡ ಕಾರಿದರು.
ಈ ಸಿದ್ದಾಂತನಾ, ನಾವು ಮಾಡಿದರೆ ನೇರವಾಗಿಯೇ ಮಾಡುತ್ತೇವೆ. ಸಿದ್ದಾಂತಕ್ಕೂ ಜನರ ಭಾವನೆಗಳಿಗೂ ಬಹಳ ವ್ಯತ್ಯಾಸವಿದೆ, ಸಿದ್ದಾಂತ ಒಂದು ಭಾಗವಾದರೆ, ಜನರ ಬದುಕು ಇನ್ನೊಂದು ಭಾಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮಾರ್ಮಿಕವಾಗಿ ನುಡಿದರು.
ಹೆಸರು ಜಾತ್ಯಾತೀತ ಕೋಮುವಾದಿಗಳ ಜೊತೆ ಕೈ ಜೋಡಿಸಿದ್ದಾರೆ..
ಜಾತ್ಯಾತೀತ ಅಂತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಕೈ ಜೋಡಿಸಿದ್ದಾರೆ’ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಸಿಎಂ ಸಿದ್ದರಾಮಯ್ಯ ಶನಿವಾರ ಹುಬ್ಬಳ್ಳಿಯಲ್ಲಿ ಲೇವಡಿ ಮಾಡಿದ್ದರು.
ದೇವೇಗೌಡರು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದಿದ್ದರು. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದಾಗ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ನವರು ಅಧಿಕಾರಕ್ಕಾಗಿ ಯಾರ ಜೊತೆಯೂ ಹೋಗ್ತಾರೆ ಎಂದು ಟೀಕಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.