ರಾಯಚೂರು: ಮಹಾನ ನಾಯಕರಾಗಿರುವ ರಮೇಶ ಜಾರಕಿಹೊಳಿ ರಾಷ್ಟ್ರೀಯ ಪಕ್ಷದಲ್ಲಿದ್ದು, ಅಂತಹ ಪಕ್ಷವನ್ನು ಬಿಟ್ಟು ಬರುವುದು ಚೆನ್ನಾಗಿ ಕಾಣಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಂಗ್‌ಕೊಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಾರಕಿಹೊಳಿ ಜೆಡಿಎಸ್‌ಗೆ ಆಗಮಿಸುವುದರ ಕುರಿತು ಯಾವುದೇ ರೀತಿಯ ಚರ್ಚೆ ಆಗಿಲ್ಲ ಅದರ ಅವಶ್ಯಕತೆಯೂ ಸಹ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್‌ನ ಆಸ್ತಿ ಬಡ ಹೆಣ್ಣು ಮಕ್ಕಳು, ಬಡವರೇ ಆಗಿದ್ದಾರೆ. ನಮ್ಮದು ಸಣ್ಣ ಪಕ್ಷ ದೊಡ್ಡ ದೊಡ್ಡ ಸಾಹುಕಾರರನ್ನು ಕಟ್ಟಿಕೊಂಡು ಏನು ಮಾಡಲಿ ಎಂದು ವ್ಯಂಗ್ಯವಾಡಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆ ಮಾಡಿಕೊಳ್ಳಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ರಾಜ್ಯದಲ್ಲಿ ಸರ್ಕಾರ ತರುವುದಕ್ಕೆ ರಮೇಶ ಜಾರಕಿಹೊಳಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನನಗೆ ರಾಜಕೀಯ ಜನ್ಮಕೊಟ್ಟಿದ್ದು ರಾಮನಗರ ಜಿಲ್ಲೆ. ನಂತರ ರಾಜ್ಯದಲ್ಲಿ ನನ್ನ ಬೆಳವಣಿಗೆ ಮಂಡ್ಯದ ಜನರು ಶಕ್ತಿ ತುಂಬಿದ್ದಾರೆ ಎಂದರು.
ನಾನು ಮಂಡ್ಯಕ್ಕೆ ಹೊಸದಾಗಿ ಹೋಗಬೇಕಾಗಿಲ್ಲ. ಯಾವ ಹಿನ್ನೆಲೆಯಲ್ಲಿ ಶ್ರೀನಿವಾಸ ಅವರು ಆಹ್ವಾನ ನೀಡಿದ್ದಾರೆಯೋ ಗೊತ್ತಿಲ್ಲ. ಈಗಾಗಲೇ ಚೆನ್ನಪಟ್ಟಣದ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದು ಯಾವ ಕಾರಣಕ್ಕೆ ಸುದ್ದಿಯನ್ನು ಹರಿದು ಬಿಡುತ್ತಿದ್ದಾರೆಯೋ ತಿಳಿಯದಾಗಿದೆ ಎಂದು ಹೇಳಿದರು.