ರಾಮನಗರ: ಜೆಡಿಎಸ್ ಹಾಲಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರದ ಎರೇಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದೆ ಹಾಲಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಈ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದೆ ಎಂದರು.
ಕುಮಾರಸ್ವಾಮಿಯವರು ಜೆಡಿಎಸ್ ಜಾತ್ಯಾತೀತ ನಿಲುವಿಗೆ ತಿಲಾಂಜಲಿ ಇಟ್ಟ ಪರಿಣಾಮ ಕಾಂಗ್ರೆಸ್ ಶಕ್ತಿ ವೃದ್ಧಿಯಾಗಿದೆ. ಹಿಂದೆ ಜಾತ್ಯಾತೀತ ಶಕ್ತಿಗಳಲ್ಲಿ ಮತ ವಿಭಜನೆಯಾಗುತ್ತಿತ್ತು. ಜೆಡಿಎಸ್, ಬಿಜೆಪಿ ಮೈತ್ರಿಯಿಂದಾಗಿ ಜಾತ್ಯಾತೀತ ಶಕ್ತಿಗಳು ಕಾಂಗ್ರೆಸ್ ಬೆಂಬಲಿಸುತ್ತವೆ. ಜಾತ್ಯಾತೀತ ನಿಲುವಿಗೆ ಬದ್ಧವಾಗಿರುವ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಡಿಯೋದಲ್ಲಿ ಸಿಎಂ ಪುತ್ರ ಯತೀಂದ್ರ ಹೇಳಿದ ವಿವೇಕಾನಂದ ಇವ್ರೇನಾ?
ಈ ಹಿಂದೆ ಹಾಲಿ ಶಾಸಕರು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಮುಖಂಡರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ರಣಕಹಳೆ ಮೊಳಗಿಸಿದ್ದರು .ನಮ್ಮ ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿಕೊಂಡು ಯಾರೇ ಬಂದರೂ ಅದು ಬಿಜೆಪಿ ಅಥವಾ ಜೆಡಿಎಸ್ ಆಗಿರಲಿ ಎಲ್ಲರನ್ನುಆಹ್ವಾನಿಸುತ್ತೇವೆ ಎಂದು ಹೇಳಿದ್ದರು.
ಆರು ತಿಂಗಳ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಲವಾರು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಕ್ಷ ಬದಲಾಯಿಸಿದ್ದಾರೆ ಎಂದಿದ್ದರು.
ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದ ಮಾಜಿ ಸಂಸದ ಮುದ್ದಹನುಮೇಗೌಡ: ಮತ್ತೆ ‘ಕೈ’ ಹಿಡಿಯುವ ಸಾಧ್ಯತೆ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.