ಇಂಡಿ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ವೃದ್ಧರಿಗೆ ಪ್ರತೀ ತಿಂಗಳು 5 ಸಾವಿರ ರೂ. ಮಾಸಾಶನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ಪುನಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಶಾಲೆಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಉತ್ತಮ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ.
ಜೊತೆಗೆ ದಿವ್ಯಾಂಗರು, ವಿಧವೆಯರು, ಮದುವೆಯಾಗದವರಿಗೆ ಪ್ರತೀ ತಿಂಗಳು 2,500 ಮಾಸಾಶನ ನೀಡಲಾಗುವುದು ಎಂದರು. ”ಜೆಡಿಎಸ್ ಅಧಿಕಾರಕ್ಕೆ ಬಂದಾಗ ಜನಪರವಾದ ಉತ್ತಮ ಕೆಲಸ ಮಾಡಿದೆ, ಸಬ್ಸಿಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸಾಲ ನೀಡುತ್ತೇನೆ.
ಸರಕಾರದಿಂದಲೇ ತರಬೇತಿ ನೀಡಿ, ಹಳ್ಳಿಯಲ್ಲಿಯೇ ಮಹಿಳೆಯರಿಗೆ ಉದ್ಯೋಗ ಕೊಟ್ಟು ಶಕ್ತಿ ತುಂಬುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಅಧಿಕಾರಕ್ಕೆ ತಂದರೆ ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.