ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್‌ಆರ್ ಶ್ರೀನಿವಾಸ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ರಾಜೀನಾಮೆ ಅಂಗೀಕಾರ ಆದ ಬಳಿಕ ಕಾಂಗ್ರೆಸ್ ಸೇರುತ್ತೇನೆ. ದೇವೇಗೌಡರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ದೇವೇಗೌಡರು, ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ. ದೇವೇಗೌಡರು ಹೆಚ್ಚಿನ ಪ್ರೋತ್ಸಾಹ ಕೊಟ್ಟು ಮಗನಂತೆ ನೋಕೊಂಡರು. ಕುಮಾರಸ್ವಾಮಿ ಕೂಡ ಒಡಹುಟ್ಟಿದ ತಮ್ಮನ ಹಾಗೆ ನೋಡಿಕೊಂಡಿದ್ದಾರೆ ಎಂದು ಭಾವುಕರಾದರು.


ನಾನು ಮತ್ತು ಕುಮಾರಸ್ವಾಮಿ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಇದುವರೆಗೂ ನನಗೆ ಸಹಕಾರ ಕೊಟ್ಟ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ಈ ಬಗ್ಗೆ ವಿಧಾನಸಭೆ ಸಬಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಮಾರ್ಚ್ 31ಕ್ಕೆ ನಾನು ಅಧೀಕೃತ ವಾಗಿ ಕಾಂಗ್ರೆಸ್ ಸೇರುತ್ತೇನೆ. ಶಿವಲಿಂಗೇಗೌಡ ಎಟಿ ರಾಮಸ್ವಾಮಿ ಕೂಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಗುಬ್ಬಿಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿ ಇದ್ದಾರೆ. ಅವರ ಬೆಂಬಲದೊಂದಿಗೆ ಕಾಂಗ್ರೆಸ್ನಿಂದ ಕಣಕ್ಕಿಳಿದು ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಇದೆ ಎಂದರು.