ಹುಬ್ಬಳ್ಳಿ: ಪ್ರತಿ ಚುನಾವಣೆ ಕಾರ್ಯಕರ್ತರ ಪರಿಶ್ರಮದಿಂದ ಗೆಲ್ಲಲು ಮಾತ್ರ ಸಾಧ್ಯ, ಹೀಗಾಗಿ ಯಾರಿಗೂ ವಿಶ್ರಾಂತಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಬಿಜೆಪಿ ಪದಾಧಿಕಾರಿಗಳು, ಶಕ್ತಿಕೇಂದ್ರ, ಮಹಾಶಕ್ತಿಕೇಂದ್ರಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಬಿಜೆಪಿ ಗೆಲ್ಲಲೇಬೇಕಿದೆ, ನಿಮ್ಮ ಬೂತ್, ವಾರ್ಡ್, ಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರಚಾರ ಮಾಡಿ. ನಮ್ಮ ಸರ್ಕಾರಗಳ ಸಾಧನೆ, ಕಾಂಗ್ರೆಸ್‌ನ ವೈಫಲ್ಯ ಜನರಿಗೆ ಮನವರಿಕೆ ಮಾಡಿಕೊಡಿ ಎಂದರು.
ಧಾರವಾಡಕ್ಕೆ ಐಐಟಿ, ವಂದೇ ಭಾರತ ರೈಲು, ಮೈಸೂರ ದಶಪಥ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸುಳ್ಳು ಭರವಸೆ ನೀಡುವ ಮೂಲಕ ಮತ್ತೆ ಅಧಿಕಾರದ ಕನಸು ಕಾಣುತ್ತಿದೆ. ಆದರೆ ಬಿಜೆಪಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸಮಾಜ, ಜಾತಿ ಧರ್ಮಗಳನ್ನು ಒಡೆದಾಳುವ ನೀತಿ ಕಾಂಗ್ರೆಸ್ ಅನುಸರಿಸುತ್ತಿದ್ದು, ಹೀಗೆ ಒಡೆಯುತ್ತಲೇ ತಮ್ಮ ಪಕ್ಷವನ್ನೇ ಒಡೆದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.