ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಏಪ್ರಿಲ್ 11ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ವಿರೂಪಾಕ್ಷಪ್ಪರನ್ನು ಮಾರ್ಚ್ 28ರಂದು ನ್ಯಾಯಾಲಯ ಲೋಕಾಯುಕ್ತ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು.
ಲೋಕಾಯುಕ್ತ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಕೋರ್ಟ್ಗೆ ಹಾಜರುಪಡಿಸಲಾಗಿದೆ. ಇದೇ ವೇಳೆ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಆದೇಶ ನೀಡಿದೆ. ಏಪ್ರಿಲ್ 6ರಂದು ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಈ ವೇಳೆ ಮಾಡಾಳ್ ಪರ ವಕೀಲರು ಅವರಿಗೆ ಮನೆಯ ಊಟವನ್ನೇ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಅನುಮತಿ ನೀಡದ ಕೋರ್ಟ್ ಜೈಲಿನ ಪ್ರಕಾರವೇ ಊಟ ನೀಡುವಂತೆ ಸೂಚಿಸಿದೆ. ಅಲ್ಲದೇ ಏಪ್ರಿಲ್ 6ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ್ದು, ಅಂದು ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.
ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಶಾಸಕ ಕಚೇರಿ ಮತ್ತು ಮನೆಯಲ್ಲಿ 8 ಕೋಟಿ ರೂಪಾಯಿ ಹೆಚ್ಚು ನಗದು ಪತ್ತೆಯಾಗಿತ್ತು.