ತುಮಕೂರು: ಸಿಎಂ ಆಯ್ಕೆ ಕಗ್ಗಂಟು ಇಲ್ಲ, ಯಾವ ಗಂಟು ಇಲ್ಲ, ಎಲ್ಲಾ ಸರಾಗವಾಗಿದೆ ಎಂದು ಕೆಎನ್ ರಾಜಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇದೇ 18 ಕ್ಕೆ ಪ್ರಮಾಣ ವಚನವಾಗಬಹುದು. ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ. ಡಿಕೆಶಿವಕುಮಾರ್ ಕೂಡ ಸಹಕಾರ ಕೊಡ್ತಾರೆಂಬ ವಿಶ್ವಾಸ ಇದೆ. ಜೊತೆಗೆ ಸಿಎಂ ವಿಚಾರ ಇಂದು ಫೈನಲ್ ಆಗಲೇಬೇಕು ಎಂದರು.
ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೆ ಪ್ರಮಾಣ ವಚನ ಮಾಡಲಿದ್ದು, ಮೊದಲ ದಿನವೇ ಕ್ಯಾಬಿನೆಟ್ ಮಾಡಿ, 10 ಕೆಜಿ ಅಕ್ಕಿ ಘೋಷಣೆ ಮಾಡುವ ಮೂಲಕ ಅನ್ನಭಾಗ್ಯ ಯೋಜನೆ ಜಾರಿಗೆ ತರೋದೆ ಮೊದಲ ತೀರ್ಮಾನ. ನಾನು ಸಚಿವ ಆಗಲೇಬೇಕು ಅದು ಸಹಕಾರ ಸಚಿವ ಸ್ಥಾನವೇ ಬೇಕು. ಅದು ಬಿಟ್ಟು ಬೇರೆ ಏನು ಕೇಳಲ್ಲ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಿದ್ದರೆ ಮತ್ತೊಂದೆಡೆ ಸಚಿವ ಸ್ಥಾನಕ್ಕೆ ಒಬ್ಬೊಬ್ಬರೇ ಕರ್ಚೀಫ್ ಹಾಕುತ್ತಿದ್ದಾರೆ. ಅಂತೆಯೇ ನಾನು ಸಚಿವ ಆಗಲೇಬೇಕು, ಎಂದು ಮಧುಗಿರಿ ನೂತನ ಶಾಸಕ ಕೆಎನ್ ರಾಜಣ್ಣ ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಸೋಲು ವಿಚಾರದ ಕುರಿತು ಮಾತನಾಡಿ, 40% ಕಮಿಷನ್ ಹಾಗೂ ಬೆಲೆ ಏರಿಕೆಯಿಂದ ಬಿಜೆಪಿ ಸೋತಿದೆ. ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ. ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್ ಆಗಿಲ್ಲ ಎಂದು ಹೇಳಿದರು.