ದೆಹಲಿ: ಕೆಟ್ಟದಾಗಿ ಬಟ್ಟೆ ಧರಿಸಿರುವ ಹುಡುಗಿಯರು ಶೂರ್ಪನಖಿಯನ್ನು ಹೋಲುತ್ತಾರೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.
ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿ, ನಾನು ರಾತ್ರಿ ಮನೆಗೆ ಹೊರಟಾಗ, ಈಗಿನ ಮಕ್ಕಳು ಮಾದಕ ದ್ರವ್ಯಗಳ ಅಮಲಿನಲ್ಲಿರುವುದನ್ನು ನೋಡುತ್ತೇನೆ. ಅವರನ್ನು ನೋಡಿದಾಗಲೆಲ್ಲ ಕಾರ್ ನಿಂದ ಇಳಿದು ಹೋಗಿ ಕೆನ್ನೆಗೆ ರಪ ರಪ ಬಾರಿಸಬೇಕು ಎಂದು ಅನಿಸುತ್ತದೆ ಎಂದು ಗರಂ ಆಗಿದ್ದಾರೆ.
ಅದರಲ್ಲೀಯೂ ಯುವತಿಯರನ್ನು ನೋಡಿದಾಗ, ದೇವರಾಣೆ ಅವರ ಕೆನ್ನೆಗೆ ಬಾರಿಸಬೇಕು ಎಂದು ಅನಿಸುತ್ತದೆ. ಹುಡುಗಿಯರು ಎಂಥೆಂಥಾ ಕೊಳಕು ಬಟ್ಟೆ ಧರಿಸುತ್ತಾರೆ. ನಾವು ಮಹಿಳೆಯರನ್ನು ದೇವತೆ ಎಂದು ಭಾವಿಸುತ್ತೇವೆ. ದೇವರು ನಿಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ, ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ, ನಾನು ತುಂಬಾ ಚಿಂತಿತನಾಗಿದ್ದೇನೆ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸಂಗೀತ ಶರ್ಮಾ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಮಹಿಳೆಯರನ್ನು ಪದೇ ಪದೇ ಅವಮಾನಿಸುತ್ತಾರೆ. ಮಹಿಳೆಯರನ್ನು ಶೂರ್ಪನಖಿ ಎಂದು ಕರೆಯುವುದು , ಉಡುಗೆ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡುವುದು ಸರಿಯೇ?. ಬಿಜೆಪಿ ಕ್ಷಮೆಯಾಚಿಸಿ! ಎಂದಿದ್ದಾರೆ.