ಸುವರ್ಣ ಸೌಧ : ರಾಜ್ಯದ ಕಳಸಾ ಬಂಡೂರಿ ಯೋಜನೆ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಉತ್ತರ ಕರ್ನಾಟಕ ಭಾಗದ ಜನತೆಯ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹದಾಯಿ ಬಗ್ಗೆ ಭಾರಿ ಪ್ರಮಾಣದಲ್ಲಿ ನಾವು ಹೋರಾಟ ಮಾಡಿದ್ದೆವು. ಅದರಲ್ಲಿ ನಾನೂ ಕೂಡ ಭಾಗಿಯಾಗಿದ್ದೆನು. ಆದರೆ, 2009 ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹದಾಯಿ ನೀರು ಡೈವರ್ಟ್ ಮಾಡಲು ಬಿಡೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ದರು ಎಂದು ಬೇಸರಿಸಿದರು.
ನಮ್ಮ ತಂದೆಯ ಕಾಲದಲ್ಲಿ ಆರಂಭವಾಗಿದ್ದ ಪಾದಯಾತ್ರೆ ಮತ್ತು ನಾವು ಪ್ರಾರಂಭ ಮಾಡಿದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ ಎಂದರು. ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಕಳಸಾ ಬಂಡೂರಿ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಆದರೆ, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ಡಿಪಿಆರ್ ಒಪ್ಪಿಗೆ ಪಡೆದಿದೆ. ಇಲ್ಲಿ ಪಂಪ್ ಹೌಸ್ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಎಲ್ಲಾ ರೈತರ ಹೋರಾಟಕ್ಕೆ ನ್ಯಾಯ ಜಯ ಸಿಕ್ಕಿದೆ. ಇಲ್ಲಿನ ಸ್ಥಳೀಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.