ಬೆಂಗಳೂರು: ಬಿಎಂಟಿಸಿ ನಗರದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜಧಾನಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಬಿಎಂಟಿಸಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ನಾಲ್ಕು ಮಹಡಿಗಳ ಟಿಟಿಎಂಸಿ ಬಸ್ ಟರ್ಮಿನಲ್‌ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಕೆ.ಆರ್.ಮಾರುಕಟ್ಟೆ ಮತ್ತು ಸುತ್ತಮುತ್ತಲ ಜನದಟ್ಟಣೆ ನಿವಾರಣೆಗೆ ಹೆಚ್ಚು ಸಹಕಾರಿಯಾಗಲಿದೆ. ಜೊತೆಗೆ
ಬಸ್ ನಿಲ್ದಾಣದ ಸಮೀಪವೇ ನಮ್ಮ ಮೆಟ್ರೋ ರೈಲ್ವೆ ನಿಲ್ದಾಣವೂ ಇದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಟಿಟಿಎಂಸಿ ಟರ್ಮಿನಲ್‌ನಲ್ಲಿ ಬಿಎಂಟಿಸಿ ಮತ್ತು ದೂರದೂರಿಗೆ ಪ್ರಯಾಣಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳು ಸಹ ಇದರ ಸೌಲಭ್ಯ ಪಡೆಯಲಿವೆ. ಕಲಾಸಿಪಾಳ್ಯ ಬಸ್ ನಿಲ್ದಾಣ 4.25 ಎಕರೆ ವಿಸ್ತೀರ್ಣವಿದ್ದು, 1.7 ಲಕ್ಷ ಚದರ ಅಡಿಗಳ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಸುಮಾರು 63.17 ಕೋಟಿ ರೂ. ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಿಸಲಾಗಿದೆ.