ಕಲಬುರಗಿ : ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ದ ಅಮೃತ ಮಹೋತ್ಸವ ಮತ್ತು ಸಂವಿಧಾನದ ವಿಧಿ 371 (ಜೆ) ತಿದ್ದುಪಡಿಗೊಂಡು ಅನುಷ್ಠಾನಗೊಂಡಿರುವ ದಶಮಾನೋತ್ಸವ ದಿನಾಚರಣೆಯನ್ನು ನಗರದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.
ಹೈದರಾಬಾದ್ನಿಂದ ವಿಶೇಷ ವಿಮಾನದಲ್ಲಿ ಇಂದು ಬೆಳಿಗ್ಗೆ 8.30ಕ್ಕೆ ಕಲಬುರಗಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ, ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಿನ್ನೆಲೆ, ಪೊಲೀಸ್ ಪರೇಡ್ ಮೈದಾನ ಮತ್ತು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಲಬುರಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಸಿಎಂ ಆಗಮನ ಹಿನ್ನೆಲೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ನಗರದಲ್ಲಿ ಹದ್ದಿನ ಕಣ್ಣಿಡಲಾಗಿದೆ.
ಭಾರತಕ್ಕೆ ಆಗಸ್ಟ್ 15, 1947ರಂದು ಸ್ವಾತಂತ್ರ್ಯ ದೊರೆತರೂ, ಅವಿಭಜಿತ ಆಂಧ್ರ ಪ್ರದೇಶ, ಮಹಾರಾಷ್ಟ್ರದ ಕೆಲ ಪ್ರದೇಶಗಳು ಮತ್ತು ಉತ್ತರ ಕರ್ನಾಟಕದ ಕಲಬುರಗಿ, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ ಮತ್ತು ಬೀದರ್ ಜಿಲ್ಲೆಗಳು ಹೈದರಾಬಾದ್ ನಿಜಾಮರ ರಾಜಾಡಳಿತದಲ್ಲೇ ಮುಂದುವರಿದಿತ್ತು. ಭಾರತ ಒಕ್ಕೂಟದ ಜೊತೆಗೆ ಹೈದರಬಾದ್ ರಾಜ್ಯವನ್ನು ವಿಲೀನಗೊಳಿಸಲು ನಿಜಾಮ್ ರಾಜ ನಿರಾಕರಿಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರಯತ್ನದ ಫಲವಾಗಿ ಸೆಪ್ಟೆಂಬರ್ 17, 1948 ರಂದು ಹೈದರಾಬಾದ್ ರಾಜ್ಯ ಭಾರತ ಒಕ್ಕೂಟದೊಂದಿಗೆ ವಿಲೀನವಾಯಿತು. ಈ ದಿನದ ಸವಿ ನೆನಪಿಗೆ ‘ಕಲ್ಯಾಣ ಕರ್ನಾಟನ ವಿಮೋಚನಾ ದಿನ’ ಆಚರಣೆ ಮಾಡಲಾಗ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.