ಧಾರವಾಡ: ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡಕ್ಕೆ ಇರಬೇಕು, ಹಿಂದಿ ಬಗ್ಗೆ ಹೇಳಿದರೆ ಹೇರಿಕೆ ಅಂತಾರೆ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ,ನಮ್ಮಲ್ಲಿ ಹಿಂದಿ ಬೇಡ ಅಂತಾರೆ. ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ. ಇಂಗ್ಲೀಷ್ ಹಾಗೆಯೇ ಬಿಡ್ತಾರೆ ಇಂಗ್ಲೀಷ್ ಏನು ನಮ್ಮ ಅಪ್ಪನ ಮನೆ ಭಾಷೆಯಾ? ನಮ್ಮಲ್ಲಿ ಕನ್ನಡ ಇಲ್ಲ ಅಂದ್ರೆ ಇಂಗ್ಲಿಷ್ ನಡೆಯುತ್ತದೆಯಂತೆ? ಇದು ವಿಚಿತ್ರ ಸ್ಥಿತಿ. ಇಂತಹ ಸ್ಥಿತಿ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂದು ಜೋಶಿ ಹೇಳಿದರು.
ಕನ್ನಡದಲ್ಲಿಯೇ ಮಾತನಾಡಬೇಕು, ಕನ್ನಡದಲ್ಲಿಯೆ ವ್ಯವಹರಿಸಬೇಕು. ನಾವು ಮಾಡುವ ವಿಚಾರ ಜನರಿಗೆ ತಿಳಿಸಲು ಮಾತೃಭಾಷೆಯೇ ಬೇಕು. ಕನ್ನಡದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂಗ್ಲೀಷ್‌ಗೆ ಐದಾರು ನೂರು ವರ್ಷಗಳ ಇತಿಹಾಸ ಇದೆ. ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಧಾರವಾಡ ಗ್ರಾಮೀಣ 8, ಕಲಘಟಗಿ 7, ನವಲಗುಂದ 4 ಹೀಗೆ ಒಟ್ಟು 26 ಶಾಲಾ ಕೊಠಡಿಗಳನ್ನು 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಕೊಠಡಿಗಳು ವಿದ್ಯಾರ್ಥಿಗಳ ಬಳಕೆಗೆ ದೊರೆಯಲಿವೆ ಎಂದು ತಿಳಿಸಿದ್ದಾರೆ.