ನವದೆಹಲಿ: ನೆರೆಯ ರಾಷ್ಟ್ರ ಮಹಾರಾಷ್ಟ್ರ ಬೆಳಗಾವಿಯಲ್ಲಿ ಪದೇ ಪದೆ ಗಡಿ ಖ್ಯಾತೆ ತೆಗೆಯುತ್ತಿದೆ. ಸದ್ಯ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಎರಡು ರಾಜ್ಯಗಳ ನಡುವಿನ ಗಡಿ ವಿವಾದ ತೀವ್ರಗೊಂಡಿರುವ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶ ಮಾಡಲು ನಿರ್ಧರಿಸಿದ್ದಾರೆ. ಇಂದು ಅಮಿತ್ ಶಾ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದು, ಗಡಿ ವಿವಾದದ ಮಾತುಕತೆ ನಡೆಯಲಿದೆ.
ಇಂದು ಸಂಜೆ 7 ಗಂಟೆಗೆ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮುಖಾಮುಖಿಯಾಗಲಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವ ಹಿನ್ನೆಲೆ ಪ್ರದೇಶ ಅಥಾವ ಊರುಗಳ ಮರು ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಾಗ್ಯೂ ಗಡಿ ಸಮಸ್ಯೆಯಿಂದ ಎರಡು ರಾಜ್ಯಗಳಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದ್ದು, ಮುಖ್ಯವಾಗಿ ಈ ಬಗ್ಗೆ ಚರ್ಚೆಯಾಗಲಿದೆ. ಗಲಭೆಗಳು ಹೆಚ್ಚುತ್ತಿರುವ ಹಿನ್ನೆಲೆ ಸ್ಥಳೀಯ ಸಂಘಟನೆಗಳನ್ನು ನಿಯಂತ್ರಿಸಲು ಹಾಗೂ ಎರಡು ರಾಜ್ಯಗಳಲ್ಲೂ ಶಾಂತಿ ಕಾಪಾಡಲು ಅಮಿತ್ ಶಾ ಕಠಿಣ ಎಚ್ಚರಿಗೆ ನೀಡಬಹುದು ಎನ್ನಲಾಗುತ್ತಿದೆ.