ಹಾಸನ: ಹಾಸನ ಜಿಲ್ಲೆಯ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದೆ. ಕೆಪಿಸಿಸಿಯಿಂದ ತಾತ್ಕಾಲಿಕವಾಗಿ ಫೈನಲ್ ಮಾಡಿ ಮುಂದಿನ ಕಮಿಟಿಗೆ ಕಳುಹಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಶಿವಲಿಂಗೇಗೌಡ ಹಾಗೂ ಹಾಲಿ ಬಿಜೆಪಿಯಲ್ಲಿರುವ ಎ.ಮಂಜು ಹೆಸರಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಅರಸಿಕೆರೆಯ ಜೆಡಿಎಸ್‍ನ ಹಾಲಿ ಶಾಸಕರ ಹೆಸರಿದ್ದು ಭಾರಿ ಕುತೂಹಲ ಮೂಡಿಸಿದೆ. ಹಾಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಕ್ಷ ತೊರೆದು ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತಾರಾ ಎಂಬ ಚರ್ಚೆಗೆ ಈ ಪಟ್ಟಿ ಪುಷ್ಠಿ ನಿಡಿದೆ. ಕಾಂಗ್ರೆಸ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಅರಸೀಕೆರೆಯಿಂದ ಟಿಕೆಟ್ ನೀಡಲಾಗುತ್ತದೆ ಎಂಬ ಚರ್ಚೆಗಳಿಗೆ ಈ ಪಟ್ಟಿ ಇನ್ನಷ್ಟು ಬಣ್ಣ ಹಚ್ಚಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಕೆ.ಎಂ.ಶಿವಲಿಂಗೇಗೌಡ, ಅರಕಲಗೂಡು ಕ್ಷೇತ್ರದಿಂದ ಹಾಲಿ ಬಿಜೆಪಿಯಲ್ಲಿರುವ ಹಾಗೂ ಮಾಜಿ ಸಚಿವ ಎ.ಮಂಜು, ಬೇಲೂರು ಕ್ಷೇತ್ರದಿಂದ ಮಾಜಿ ಸಚಿವ ಬಿ.ಶಿವರಾಂ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ದಿವಂಗತ ಹೆಚ್.ಸಿ.ಶ್ರೀಕಂಠಯ್ಯ ಹಿರಿಯ ಪುತ್ರ ಲಲಿತ್ ರಾಘವ್, ಹಾಸನ ವಿಧಾನಸಭಾ ಕ್ಷೇತ್ರದಿಂದ ಬಿ.ಕೆ.ರಂಗಸ್ವಾಮಿ ಅಲಿಯಾಸ್ ಬನವಾಸೆ ರಂಗಸ್ವಾಮಿ, ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಶ್ರೇಯಸ್ ಪಟೇಲ್, ಆಲೂರು-ಸಕಲೇಶಪುರ ಕ್ಷೇತ್ರದಿಂದ ಮುರುಳಿ ಮೋಹನ್‍ಗೆ ಟಿಕೆಟ್ ಶಿಫಾರಸ್ಸು ಮಾಡಿ ಕಳುಹಿಸಿರುವ ಪಟ್ಟಿ ವೈರಲ್ ಆಗಿದ್ದು ಆಕಾಂಕ್ಷಿಗಳಲ್ಲಿ ಕೊಂಚ ನಿರಾಸೆ ಮೂಡಿದೆ.