ಬೆಂಗಳೂರು: ರಾಜ್ಯ ವಿಧಾನಸಬಾ ಚುನಾವಣೆ 2023ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಬಾರಿಯ ಚುನಾವಣೆಗೆ ರಾಜ್ಯದಾದ್ಯಂತ 2.2 ಲಕ್ಷ ಪೊಲೀಸರನ್ನು ಚುನಾವಣಾ ಭದ್ರತೆಗೆ ನಿಯೋಜಿಸಲಾಗಿದೆ.
ವಿಧಾನಸಭೆ ಚುನಾವಣೆ ಮತದಾನಕ್ಕೆ 55,282 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅವುಗಳಿಗೆ ಪೊಲೀಸ್ ಸಿಬ್ಬಂದಿಯ ಜತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಜಿದ್ದಾಜಿದ್ದಿನ ಅಖಾಡದಲ್ಲಿ ಕಳೆದ 15 ದಿನಗಳಿಂದ ಸಾಗಿದ ಬಿರುಸಿನ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕಣದಲ್ಲಿರುವ ಅಭ್ಯರ್ಥಿಗಳಿಂದ ಇಂದು ಮನೆ ಮನೆ ಪ್ರಚಾರ ನಡೆಯಲಿದ್ದು, ಅತ್ತ ಚುಣಾವಣಾ ಅಧಿಕಾರಿಗಳು ಸಹ ವೋಟಿಂಗ್ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೂ ಸಹ ಕಟ್ಟೆಚ್ಚರ ವಹಿಸಿದ್ದು, ರಾಜ್ಯಾದ್ಯಂತ ಮತದಾನಕ್ಕೆ ಒಟ್ಟು 1.56 ಲಕ್ಷ ಪೊಲೀಸರು ಬಿಗಿ ಭದ್ರತೆಗೆ ನಿಯೋಜಿತರಾಗಿದ್ದಾರೆ.