ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದಲ್ಲಿನ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ಮುಂಬರುವ ನೇಮಕಾತಿ ಪರೀಕ್ಷೆಗಳಿಗೆ ಹೆಡ್ ಕವರ್‌ಅನ್ನು ನಿಷೇಧಿಸಿದೆ. ಪರೀಕ್ಷಾ ಕೊಠಡಿಯೊಳಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್ ಫೋನ್‌ಗಳು, ಬ್ಲೂಟೂತ್ ಹಾಗೂ ಇಯರ್‌ಫೋನ್‌ಗಳನ್ನು ಪ್ರಾಧಿಕಾರವು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಕುರಿತು ಟ್ಟಿಟ್ ಮಾಡಿರುವ ಕೆಇಎ, ನವೆಂಬರ್ 18 ಮತ್ತು 19 ರಂದು ರಾಜ್ಯಾದ್ಯಂತ ನಡೆಯಲಿರುವ ವಿವಿಧ ಮಂಡಳಿಗಳು ಮತ್ತು ನಿಗಮಗಳ ನೇಮಕಾತಿ ಪರೀಕ್ಷೆಗಳಿಗೆ ಡ್ರೆಸ್ ಕೋಡ್ ಅನ್ನು ಪ್ರಕಟಿಸಿದೆ. ಈ ನಿರ್ಧಾರವು ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ಪರೀಕ್ಷಾ ಅಕ್ರಮಗಳನ್ನು ತಡೆಯುವ ಪ್ರಯತ್ನದ ಭಾಗವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಕುಮಾರಸ್ವಾಮಿಯಿಂದ ವಿದ್ಯುತ್ ಕಳ್ಳತನ: ವಿಡಿಯೋ ಸಹಿತ ಆರೋಪಿಸಿದ ಕಾಂಗ್ರೆಸ್
ಡ್ರೆಸ್ ಕೋಡ್‌ನಲ್ಲಿ ಸ್ಪಷ್ಟವಾಗಿ ಹಿಜಾಬ್ ನಿಷೇಧಿಸದಿದ್ದರೂ, ಹೊಸ ಮಾರ್ಗಸೂಚಿಗಳಿಂದ ಇದು ತಿಳಿಯುತ್ತದೆ. ಈ ಹಿಂದೆ ಹಿಜಾಬ್ ಧರಿಸಿದ್ದ ಮಹಿಳೆಯರನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೂಲಂಕುಷವಾಗಿ ತಪಾಸಣೆ ನಡೆಸಿ, ನಂತರ ಅವರನ್ನು ಹಾಲ್‌ಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.
ಈ ಹಿಂದೆ, ಕರ್ನಾಟಕ ಸರ್ಕಾರವು ಕೆಇಎ ನಡೆಸುವ ನೇಮಕಾತಿ ಸಂಬಂಧಿತ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿತ್ತು. ಐದು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ಅಕ್ಟೋಬರ್ 28 ಮತ್ತು 29 ರಂದು ಪರೀಕ್ಷೆಗಳನ್ನು ನಡೆಸಲಾಗಿತ್ತು.
ಯಾವ್ಯಾವ ವಸ್ತುಗಳನ್ನು ನಿಷೇಧಿಸಿದೆ ಕೆಇಎ..?
- ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ.
- ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗೂ ತಿನ್ನುವುದನ್ನು ನಿಷೇಧಿಸಲಾಗಿದೆ.
- ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಗಳು ಮತ್ತು ಲಾಗ್ ಟೇಬಲ್ ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ.
- ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸಿವುದನ್ನು ಬಾಯಿ ಕಿವಿ ಹಾಗು ತಲೆ ಮುಚ್ಚುವ ವಸ್ತ್ರವನ್ನು / ಸಾಧನವನ್ನು ಧರಿಸುವುದನ್ನು ನಿಷೇಧಿಸಿದೆ.
- ಯಾವುದೇ ರೀತಿಯ ಮಾಸ್ಕ ಅನ್ನು ಧರಿಸುವಂತಿಲ್ಲ. ಎಂದು ಸುತ್ತೋಲೆ ಹೊರಡಿಸಿದೆ.
2022 ರ ಜನವರಿಯಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ್ದ ಆರು ಜನ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸದಂತೆ ನಿರ್ಬಂಧಿಸಿದ್ದಾಗ, ಹಿಜಾಬ್‌ನ ಕೋಮು ಜ್ವಾಲೆ ರಾಜ್ಯಾದ್ಯಂತ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರವೇಶ ನಿರಾಕರಿಸಿದ್ದಕ್ಕೆ ಬಾಲಕಿಯರು ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ವಿದ್ಯುತ್ ಕಳ್ಳತನದ ಕಾಂಗ್ರೆಸ್ ಆರೋಪಕ್ಕೆ ಕುಮಾರಸ್ವಾಮಿ ಸ್ಪಷ್ಟನೆ
ನೂತನ ಶಿಕ್ಷಣ ನೀತಿ (ಎನ್‌ಇಪಿ) ಹೆಸರಿನಲ್ಲಿ ಶಿಕ್ಷಣ ಕ್ಷೇತ್ರವನ್ನು ಕಲಬೆರಕೆ ಮಾಡಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವಿಚಾರವನ್ನಿಟ್ಟುಕೊಂಡು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹೇಳಿದ್ದರು. ಕರ್ನಾಟಕದ ಸಾಮರಸ್ಯ ಮತ್ತು ಜಾತ್ಯತೀತ ಪರಂಪರೆಯನ್ನು ರಕ್ಷಿಸುವ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ, ದ್ವೇಷದ ರಾಜಕಾರಣವನ್ನು ಸಹಿಸುವುದಿಲ್ಲ ಮತ್ತು ಭಯದ ವಾತಾವರಣವನ್ನು ನಿರ್ಮೂಲನೆ ಮಾಡಲಾಗುವುದು ಸಿದ್ದರಾಮಯ್ಯ ಆ ಸಮಯದಲ್ಲಿ ಒತ್ತಿ ಹೇಳಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.