ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಬಿಎಂಪಿ ಗುತ್ತಿಗೆ ಕಮಿಷನ್ ಹಾಗೂ ವರ್ಗಾವಣೆ ದಂಧೆ ಆರೋಪ ಮಾಡಿದ್ದ ರಾಜ್ಯ ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ರಾಜ್ಯ ನಾಯಕರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಯಾವುದೇ ಕಾರಣ ನೀಡದೆ ಬಿಜೆಪಿ ಮುಂದೂಡಿದ್ದು, ರಾಜ್ಯ ನಾಯಕರಿಗೆ ನಾಯಕತ್ವದ ಸಮಸ್ಯೆ ಕಾಡ್ತಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಕಾಂಗ್ರೆಸ್ ವಿರುದ್ಧ ಸರಣಿ ಪ್ರತಿಭಟನೆಗಳನ್ನು ನಡೆಸಲು ಪ್ಲಾನ್ ಮಾಡಿದ್ದ ಬಿಜೆಪಿ, ಇದೀಗ ಮುಂದೂಡಿಕೆ ಮಾತ್ರ ಸೀಮಿತವಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಸೆಪ್ಟೆಂಬರ್ 28 ರಿಂದ ಆಗಸ್ಟ್ 8 ರವರೆಗೂ ಸರ್ಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗಿತ್ತು ಬಿಜೆಪಿ. ಅದರಂತೆ, ಇಂದಿನಿಂದ ರಾಜ್ಯದಾದ್ಯಂತ ಸರಣಿ ಪ್ರತಿಭಟನೆಗಳಿಗೆ ಚಾಲನೆ ಸಿಗಬೇಕಿತ್ತು. ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ದೂರು ನೀಡಲು ಪ್ಲಾನ್ ಮಾಡಲಾಗಿತ್ತು. ಆದರೆ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ನೂರು ದಿನ ಕಳೆದಿದ್ದರೂ, ಬಿಜೆಪಿಯಲ್ಲಿ ಇನ್ನೂ ಪ್ರತಿಪಕ್ಷ ನಾಯಕನ ಆಯ್ಕೆಯಾಗಿಲ್ಲ; ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಹೊಸ ಸಾರಥಿ ಸಿಕ್ಕಿಲ್ಲ!
ಇದನ್ನೂ ಓದಿ; ನನಗೆ ಯಾವುದೇ ಬಿಜೆಪಿ ನಾಯಕರಿಂದ ಕರೆ ಬಂದಿಲ್ಲ : ಶೆಟ್ಟರ್ ಸ್ಪಷ್ಟನೆ
ಪಕ್ಷ ಹಾಗೂ ಶಾಸಕಾಂಗ ಪಕ್ಷದಲ್ಲಿ ನಾಯಕತ್ವ ಕೊರತೆ ಎದುರಿಸುತ್ತಿರುವ ಬಿಜೆಪಿ, ಇದೀಗ ಕಾರಣ ನೀಡದೆ ಪ್ರತಿಭಟನೆ ಮುಂದೂಡಿದೆ. ಆರಂಭದಲ್ಲಿ ಸರಣಿ ಕಾರ್ಯಕ್ರಮಗಳನ್ನ ಪ್ಲಾನ್ ಮಾಡಿದ್ದ ರಾಜ್ಯ ನಾಯಕರು, ಹೈಕಮಾಂಡ್ ವರಿಷ್ಠರ ನಿರಾಸಕ್ತಿಯಿಂದ ತಮ್ಮ ಎಲ್ಲ ಯೋಜನೆಗಳ ಅನುಷ್ಠಾನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವನ್ನು ಕಟ್ಟಿ ಹಾಕುವುದರಲ್ಲಿ ರಾಜ್ಯ ಬಿಜೆಪಿ ನಾಯಕರು ಸತತ ವಿಫಲವಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.